ಇನ್ನು ಮುಂದೆ ಶಾಲೆಗಳಲ್ಲಿ ಶಿಕ್ಷಕರನ್ನು ಸರ್, ಮೇಡಂ ಎಂದು ಕರೆಯುವಂತಿಲ್ಲ !! | ಹಾಗಿದ್ರೆ ಇನ್ನು ಹೇಗೆ ಸಂಬೋಧಿಸುವುದು??
ಇಷ್ಟು ದಿನ ವಿದ್ಯಾರ್ಥಿಗಳು ಲಿಂಗಾನುಸಾರವಾಗಿ ಶಾಲೆಗಳಲ್ಲಿ ಶಿಕ್ಷಕರನ್ನು ಸರ್, ಮೇಡಂ ಎಂದು ಕರೆಯುತ್ತಿದ್ದರು. ಆದರೆ ಇನ್ನುಮುಂದೆ ಕೇರಳದಲ್ಲಿ ಶಿಷ್ಯರು, ಗುರುಗಳನ್ನು ‘ಟೀಚರ್’ ಎಂದು ಸಂಬೋಧಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಇನ್ಮುಂದೆ ಲಿಂಗ ಬೇಧವಿಲ್ಲದೆ ವಿದ್ಯಾರ್ಥಿಗಳು ಟೀಚರ್ ಎಂದು ಕರೆಯುತ್ತಾರೆ. ಈ ಧೋರಣೆಯನ್ನು ಜಾರಿಗೆ ತಂದಿರುವ ಕೇರಳದ ಮೊದಲ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾಲಕ್ಕಾಡ್ ಜಿಲ್ಲೆ ಒಲಶ್ಶೇರಿ ಗ್ರಾಮದ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆ ಪಾತ್ರವಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ಸರ್ ಎಂದು ಸಂಬೋಧಿಸುವ ಅಭ್ಯಾಸವನ್ನು ತೊಡೆದು ಹಾಕಲು ಅಭಿಯಾನ ಪ್ರಾರಂಭಿಸಲಾಗಿದೆ. ಪಾಲಕ್ಕಾಡ್ ಮೂಲದ ಸಾಮಾಜಿಕ ಕಾರ್ಯಕರ್ತ ಬೋಬನ್ ಮಟ್ಟುಮಂದ ಅವರಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ವೇಣುಗೋಪಾಲನ್ ಎಚ್. ತಿಳಿಸಿದ್ದಾರೆ.
14 ಕಿ.ಮೀ. ದೂರದಲ್ಲಿರುವ ಮಾತೂರು ಪಂಚಾಯಿತಿಯಲ್ಲೂ ಕಳೆದ ವರ್ಷ ಜುಲೈನಲ್ಲಿ ಅಧಿಕಾರಿಗಳನ್ನು ಲಿಂಗ ಸಮಾನತೆಯ ದೃಷ್ಟಿಕೋನದಲ್ಲಿ ಹುದ್ದೆಯ ಹೆಸರಲ್ಲಿ ಸಂಬೋಧಿಸುವ ಸಂಪ್ರದಾಯವನ್ನು ತೊಡೆದು ಹಾಕಿತ್ತು. ಇವೆಲ್ಲದರಿಂದ ಪ್ರೇರಣೆಗೊಂಡು ನಾವು ಕೂಡ ಲಿಂಗ ಭೇದವಿಲ್ಲದೆ ಸಂಬೋಧಿಸುವ ಪದ್ಧತಿಯನ್ನು ನಮ್ಮ ಶಾಲೆಯಲ್ಲಿಯೂ ಅಳವಡಿಸಿಕೊಳ್ಳಲು ಯೋಚಿಸಿದೆವು ಎಂದು ಹೇಳಿದ್ದಾರೆ.
ಈ ಕ್ರಮವನ್ನು ಮಕ್ಕಳ ಪೋಷಕರೂ ಸ್ವಾಗತಿಸಿದ್ದಾರೆ ಎಂದು ತಿಳಿಸಿದ್ದಾರೆ. ಶಾಲೆಯಲ್ಲಿ ಅನುಸರಿಸಲಾಗುವ ಈ ಪದ್ಧತಿಯು ಲಿಂಗಾನುಸಾರ ಸಂಬೋಧನೆಗೆ ಸಂಬಂಧಿಸಿದಂತೆ ತಟಸ್ಥ ಧೋರಣೆಯ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದಿದ್ದಾರೆ.