ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ವಿಕಾಸ ಸಪ್ತಾಹ ಕಾರ್ಯಕ್ರಮ
ವಿವೇಕ ಚಿಂತನೆ ಅರ್ಥೈಸಿಕೊಂಡು ಅನುಷ್ಠಾನಗೊಳಿಸುವುದು ಅತ್ಯಗತ್ಯ- ರಾಹುಲ್ ಭಟ್
ಪುತ್ತೂರು: ವಿವೇಕಾನಂದ ಎನ್ನುವ ಹೆಸರೇ ಒಂದು ರೋಮಾಂಚನ, ಪ್ರೇರಣೆ, ಹುಮ್ಮಸ್ಸು, ಧೀರತನ. ಅವರು ಯುವ ಜನಾಂಗಕ್ಕೆ ಬೋಧಿಸಿದ ವಿವೇಕ ಮಾರ್ಗ ಅತ್ಯಂತ ಮೌಲ್ಯಯುತವಾದದ್ದು. ವಿವೇಕಾನಂದರ ವೈಚಾರಿಕತೆ ಮತ್ತು ಆಧ್ಯಾತ್ಮ ಅರಿವು ಎಂದೆಂದಿಗೂ ಅರ್ಥಪೂರ್ಣವಾಗಿದೆ. ಅವರ ಸಾಮಾಜಿಕ ನಿಲುವು, ವಿವೇಕ ಚಿಂತನೆ ಪೂರ್ಣವಾಗಿ ಅರ್ಥೈಸಿಕೊಂಡು ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಕರ್ತವ್ಯವೂ ಹೌದು ಎಂದು ವಿಟ್ಲದ ಮೈತ್ರೇಯಿ ಗುರುಕುಲದ ಆಚಾರ್ಯ ರಾಹುಲ್ ಭಟ್ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಲಾದ ವಿವೇಕ ವಿಕಾಸ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
1893ರಲ್ಲಿ ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ ಇಂದಿಗೂ ವಿಖ್ಯಾತಿ. ಅಂದು ಅಮೇರಿಕಾದ ನನ್ನ ಸಹೋದರ, ಸಹೋದರಿಯರೇ ಎನ್ನುತ್ತಲೇ ಮಾತು ಆರಂಭಿಸಿದ್ದ ಸ್ವಾಮಿ ವಿವೇಕಾನಂದರು ಭಾರತದ ಸಂಸ್ಕೃತಿ, ಸಿರಿವಂತಿಕೆ, ಜ್ಞಾನ, ಧರ್ಮ ಇವೆಲ್ಲದರ ವಿರಾಟ್ ರಾಯಭಾರಿಯಂತೆ ಕಂಡಿದ್ದರು. ತಮ್ಮ ಪ್ರಖರ ಚಿಂತನೆ, ಸಮಾಜವನ್ನು ತಿದ್ದುವ ಸಂದೇಶಗಳ ಮೂಲಕವೇ ಅಂದು ಸ್ವಾಮಿ ವಿವೇಕಾನಂದರು ವಿದೇಶಿಯನ್ನರ ಮನಗೆದ್ದಿದ್ದರು. ರಾಷ್ಟ್ರಪ್ರೇಮ, ಭಾರತೀಯ ಸಂಸ್ಕೃತಿಯ ಆಳವಾದ ಜ್ಞಾನ ಹೊಂದಿದ್ದ ವಿವೇಕಾನಂದರು ಕಾಲ್ನಡಿಯಲ್ಲೇ ದೇಶದ ಮೂಲೆ ಮೂಲೆ ಸಂಚರಿಸಿ ಎಲ್ಲರಿಗೂ ಸ್ಫೂರ್ತಿ ತುಂಬುತ್ತಿದ್ದರು. ತನ್ನ ಮೂವತ್ತೊಂಬತ್ತುವರೆ ವರ್ಷದಲ್ಲೇ ದೇಹ ತ್ಯಜಿಸಿದ ವಿವೇಕಾನಂದರು ತಮ್ಮ ಸಂದೇಶ, ತತ್ವ, ಆದರ್ಶ, ಚಿಂತನೆಗಳ ಮೂಲಕ ಎಂದೆಂದಿಗೂ ಅಮರರಾಗಿದ್ದಾರೆ. ಯುವ ಸಮೂಹ ನೊಂದವರ ಧ್ವನಿಯಾಗುವುದರ ಜತೆಗೆ ಸಹಾಯ ಮನೋಭಾವ ಬೆಳೆಸಿಕೊಳ್ಳಬೇಕು ಎಂಬುದು ವಿವೇಕಾನಂದರು ಜಗತ್ತಿಗೆ ಸಂದೇಶ ನೀಡಿದ್ದಾರೆ. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದ ಚರಿತ್ರೆ ತಿಳಿದುಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಲ್ಲ ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶ ಅಳವಡಿಸಿಕೊಳ್ಳಬೇಕು. ಈ ಮೂಲಕ ಸ್ವಾಮಿ ವಿವೇಕಾನಂದರ ಜೀವನ ಸಾಧನೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಪುತ್ತೂರಿನ ನಗರ ಸಭಾ ಸದಸ್ಯ ಪಿ.ಜೆ. ಜಗನ್ನಿವಾಸ್ ರಾವ್ ಮಾತನಾಡಿ ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿನ ಬಡವರಿಗೆ ಹಾಗೂ ಸೌಲಭ್ಯಗಳಿಂದ ವಂಚಿತರ ಬದುಕಿಗಾಗಿ ಮಿಸಲಿಡಬೇಕು. ಮನದಲ್ಲಿ ಅಚಲ ನಿರ್ಧಾರದೊಂದಿಗೆ ಪರಿಶುದ್ಧತೆ ಉಳಿಸಿಕೊಂಡು ಬದಲಾವಣೆಯ ಕಾರ್ಯದತ್ತ ಯುವಜನತೆ ಮನಮಾಡಬೇಕಿದೆ ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ ಸೇವೆ ಮತ್ತು ತ್ಯಾಗ ಎಂಬ ಶಸ್ತ್ರಗಳನ್ನು ತನ್ನದಾಗಿಸಿಕೊಂಡು ಜಗತ್ತನ್ನು ಗೆದ್ದ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರು. ಸ್ವಾಮಿ ವಿವೇಕಾನಂದ ದೇಶದ ಯುವ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಆಧ್ಯಾತ್ಮ ಹಾಗೂ ದೇಶಾಭಿಮಾನ ಮೂಡಿಸಿದ್ದಾರೆ. ಯುವಕರ ಪಾಲಿಗೆ ಸ್ವಾಮಿ ವಿವೇಕಾನಂದ ಆದರ್ಶ ವ್ಯಕ್ತಿಯಾಗಿದ್ದಾರೆ. ಯುವ ಸಮೂಹದಲ್ಲಿ ಭಾರತದ ಭವಿಷ್ಯ ಅಡಗಿದ್ದು, ವಿಶ್ವದ ಜನ-ಜೀವನದ ಜಾಗರಣೆಗೆ ವಿವೇಕಾನಂದರ ಸಂದೇಶ ಅಗತ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಸಾಂಸ್ಕೃತಿಕ ಹಾಗೂ ಜೀವನ ಮೌಲ್ಯಗಳ ಕೊಡುಗೆಯನ್ನು ವಿಶ್ವ ಎದುರು ನೋಡುತ್ತಿದ್ದು, ವಿವೇಕಾನಂದರ ಪ್ರೇರಣೆಯಂತೆ ಜಾಗತಿಕ ಶಿಕ್ಷಣದಲ್ಲಿ ಭಾರತೀಯ ಮೌಲ್ಯಗಳ ಸೇರ್ಪಡೆ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಕೃಷ್ಣಪ್ರಸಾದ್ ನಡ್ಸಾರ್, ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ,ಸದಸ್ಯರಾದ ವತ್ಸಲಾ ರಾಜ್ಞಿ, ಗೋಪಾಲಕೃಷ್ಣ ಭಟ್, ಪ್ರಾಂಶುಪಾಲ ಮಹೇಶ ನಿಟಿಲಾಪುರ , ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುನೀತ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಭಾರ್ಗವಿ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ಶ್ರೀಧರ್ ಶೆಟ್ಟಿಗಾರ್ ಸ್ವಾಗತಿಸಿ ವಿದ್ಯಾರ್ಥಿನಿ ಕೃತಿ ವಂದಿಸಿದರು.
*ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಅಂಗವಾಗಿ ಆಯೋಜಿಸಲಾದ ವಿವೇಕ ವಿಕಾಸ ಸಪ್ತಾಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸ್ಫರ್ಧೆಗಳನ್ನು ಕಾಲೇಜಿನಲ್ಲಿ ಆಯೋಜಿಸಲಾಗಿದೆ. ವಿವೇಕಾನಂದರ ವಿಚಾರ ಧಾರೆಗಳು ಎಲ್ಲಾ ವಿದ್ಯಾರ್ಥಿಗಳಿಗೂ ತಲುಪಿಸುವುದು ಇದರ ಉದ್ದೇಶವಾಗಿದೆ. ಸುಮಾರು ಏಳು ದಿನಗಳ ಕಾಲ ನಡೆಯುವ ಸ್ಫರ್ಧೆಯಲ್ಲಿ ವಿವೇಕಾನಂದರ ಕುರಿತಾದ ಪ್ರಬಂಧ, ಭಾಷಣ, ಚಿತ್ರಕಲೆ, ತರಬೇತಿ ಕಾರ್ಯಾಗಾರ, ಯೋಗ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಮಹೇಶ ನಿಟಿಲಾಪುರ ತಿಳಿಸಿದ್ದಾರೆ