ಪರಿಸರಕ್ಕಾಗಿ ತಲೆಗೆ ತಲೆ ಕೊಡಲು ಸಿದ್ಧರಾಗಿರುವ ಬಿಷ್ಣೊಯ್ ಸಮುದಾಯದ ಬಗ್ಗೆ ನಿಮಗೆಷ್ಟು ಗೊತ್ತು ?|ಈ ಪ್ರಾಣಿ ಪ್ರೇಮಿಗಳ ಹಟದಿಂದಲೇ ಸಲ್ಮಾನ್ ಖಾನ್ ಕೃಷ್ಣ ಮೃಗ ಕೇಸಿನಲ್ಲಿ ಶಿಕ್ಷಿತನಾದದ್ದು..!!
2018 ರಲ್ಲಿ ಸಲ್ಮಾನ್ ಖಾನ್ ಗೆ ಕೃಷ್ಣ ಮೃಗ ಭೇಟೆ ಪ್ರಕರಣದಲ್ಲಿ ಐದು ವರ್ಷ ಶಿಕ್ಷೆ ಹಾಗೂ 2.50 ಲಕ್ಷ ಜುಲ್ಮಾನೆ ವಿಧಿಸಲಾಗಿದೆ. ಆದರೆ ಜೋಧ್ ಪುರದ ಸೆಷನ್ಸ್ ನ್ಯಾಯಾಲಯದ ಈ ಆದೇಶವನ್ನು ಸಲ್ಮಾನ್ ಖಾನ್ ಪ್ರಶ್ನೆ ಮಾಡಿದ್ದಾರೆ. ವಿಚಾರಣೆ ಇನ್ನೂ ಚಾಲ್ತಿಯಲ್ಲಿರುವುದರಿಂದ ಸಲ್ಮಾನ್ ಖಾನ್ ಈಗ ಆರಾಮವಾಗಿ ಹೊರಗಡೆ ಸುತ್ತಾಡಿಕೊಂಡಿದ್ದಾರೆ.
1998 ರಲ್ಲಿ ಕೃಷ್ಣಮೃಗ ಭೇಟೆಯಾಡಿದ ರಾಜಸ್ಥಾನದ ಜೋದ್ ಪುರದ ಸ್ಥಳದಲ್ಲಿಯೇ ಬಿಶ್ಣೋಯ್ ಸಮುದಾಯದವರು ಕೃಷ್ಣಮೃಗದ ಸ್ಮಾರಕ ನಿರ್ಮಾಣ ಮಾಡಲಿದ್ದು, ಇದರ ಜೊತೆಗೆ ಗಾಯಗೊಂಡ ಪ್ರಾಣಿಗಳ ಆರೈಕೆ, ಸಂರಕ್ಷಣೆಗೆ ಕೇಂದ್ರವೊಂದನ್ನು ಸ್ಥಾಪಿಸಲಿದೆ.
ಸಲ್ಮಾನ್ ಖಾನ್ ಈ ಕೃಷ್ಣಮೃಗ ಕೇಸಲ್ಲಿ ಸುಲಭವಾಗಿ ತಪ್ಪಿಸಿಕೊಳ್ಳದಂತೆ ತಡೆ ಹಿಡಿದು ಆತನಿಗೆ ಶಿಕ್ಷೆ ವಿಧಿಸುವವರೆಗೆ ಹೋರಾಡಿದ ಎಲ್ಲಾ ಶ್ರೇಯ ಬಿಶ್ಣೋಯ್ ಸಮುದಾಯಕ್ಕೆ ಸೇರುತ್ತೆ. ಈ ಜನಾಂಗದವರು ಕೃಷ್ಣ ಮೃಗಗಳನ್ನು ತಮ್ಮ ದೇವರೆಂದು, ತಮ್ಮ ಸಮುದಾಯದ ಮೊದಲ ಗುರು ಜಂಬೇಶ್ವರ್ ಅಥವಾ ಜಂಬಾಜಿಯ ಅವತಾರ ಎಂದು ನಂಬುತ್ತಾರೆ. ಈ ಕಾರಣದಿಂದಾಗಿಯೇ ಬಿಶ್ಣೋಯ್ ಸಮುದಾಯವು ಸಲ್ಮಾನ್ ಖಾನ್ ಕೃಷ್ಣ ಮೃಗವನ್ನು ಭೇಟೆ ಆಡಿದಾಗ ತೀವ್ರವಾಗಿ ಖಂಡಿಸಿ 1998 ರಿಂದಲೂ ಸಲ್ಮಾನ್ ಖಾನ್ ಗೆ ಶಿಕ್ಷೆ ಕೊಡಿಸಲೆಂದು ಪ್ರಯತ್ನ ಪಡುತ್ತಲೇ ಇದೆ. ಇಂಥಾ ಪ್ರಾಣಿ ಮತ್ತು ಪಕ್ಷಿ ಪ್ರಿಯರ ಬಗ್ಗೆ ಮತ್ತೊಂದಿಷ್ಟು ಮಾತು ಹೇಳುವುದು ಅನಿವಾರ್ಯ.
ಬಿಷ್ನೋಯಿ ಸಮುದಾಯದ ಬಗ್ಗೆ
ಈ ಬಿಷ್ನೋಯಿ ಸಮುದಾಯವು ರಾಜಸ್ತಾನದ ಥಾರ್ ಮರುಭೂಮಿಯ ಪಶ್ಚಿಮ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 15 ನೇ ಶತಮಾನದಲ್ಲಿ ರಾಜಸ್ಥಾನದ ಬಿಕಾನೇರ್ನ ಗುರು ಜಂಬೇಶ್ವರ್ ( ಜಂಭಾಜಿ) ಅವರು ಬಿಷ್ನೋಯಿ ಪಂಗಡವನ್ನು ಪ್ರಾರಂಭಿಸಿದರು.
ಅವರು ಪ್ರಕೃತಿ, ಪ್ರಾಣಿಗಳನ್ನು ರಕ್ಷಿಸಲು, ಹಾಗೂ ದೇವರನ್ನು ಆರಾಧಿಸಲು 29 ತತ್ವಗಳನ್ನು ಪ್ರತಿಪಾದಿಸಿದರು. ಇವೆಲ್ಲವೂ ನಾಗ್ರಿ ಲಿಪಿಯಲ್ಲಿ ದಾಖಲಾಗಿದ್ದು, ಶಬದವಾಣಿ ಎಂದು ಕರೆಯಲಾಗುತ್ತದೆ.
” ಜೀವ್ ದೀಯಾ ಪಳನಿ, ರಂಖ್ ಲಿಲೋ ನಹಿ ದೇವ್” ಈ ಒಂದು ತತ್ವವು ಬಹಳ ಮಹತ್ವವನ್ನು ಪಡೆದಿದೆ. ಇದರ ಅರ್ಥ, ನಿಮ್ಮ ಮರಗಳನ್ನು ಮತ್ತು ಪ್ರಾಣಿಗಳನ್ನು ಸಂರಕ್ಷಿಸಿ ಎಂದು ಹೇಳಲಾಗುತ್ತದೆ. ಹಾಗಾಗಿ ಪ್ರಾಣಿಗಳನ್ನು ಕೊಲ್ಲುವುದು ಮತ್ತು ಮರಗಳನ್ನು ಕಡಿಯುವುದು ಬಿಷ್ನೋಯಿ ಸಮುದಾಯದಲ್ಲಿ ಗಂಭೀರವಾದ ಅಪರಾಧ ಮತ್ತು ಪಾಪ ಎಂದು ಪರಿಗಣಿಸಲಾಗುತ್ತದೆ.
ಯಾರಾದರೂ ಕೃಷ್ಣ ಮೃಗವನ್ನು ಮತ್ತು ಮರಗಳನ್ನು ತಮ್ಮ ಸಮುದಾಯದಲ್ಲಿ ಕೊಂದರೆ ಅಥವಾ ಕಡಿದರೆ ಅವರ ಜೀವವನ್ನು ಸಹಿತ ತೆಗೆಯಲು ಹಿಂಜರಿಯದಂತಹ ಕಠಿಣ ಪರಿಪಾಲನೆ ನಿಯಮಗಳು ಈ ಸಮುದಾಯದಲ್ಲಿ ಇಂದಿಗೂ ರೂಢಿಯಲ್ಲಿದೆ. ಕ್ರಿ.ಶ.1730 ರಲ್ಲಿ ಬಿಷ್ನೋಯಿ ಸಮುದಾಯವು ಜೋಧಪುರ್ ಮಹಾರಾಜ ಅಭಯ ಸಿಂಗ್ ತನಗೆ ಅರಮನೆ ನಿರ್ಮಿಸಿಕೊಳ್ಳಲು ಖೇಜ್ರಿ ಮರಗಳನ್ನು ಕಡಿಯಲು ಆದೇಶಿಸಿದಾಗ, ಮರಗಳನ್ನು ದೈವ ಸ್ವರೂಪಿ ಎಂದು ಪರಿಗಣಿಸುವ ಈ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿತು. ಅಮೃತಾದೇವಿ ಎನ್ನುವ ಬಿಷ್ನೋಯಿ ಮಹಿಳೆ ಮತ್ತು ಅವಳ ಮೂವರು ಹೆಣ್ಣು ಮಕ್ಕಳು ಗಿಡಗಳನ್ನು ಅಪ್ಪಿಕೊಂಡು ಪ್ರತಿರೋಧ ವ್ಯಕ್ತಪಡಿಸಿದರು.
ಆದರೆ ರಾಜನ ಸೈನಿಕರು ಅವರನ್ನು ಪರಿಗಣಿಸದೆ ಕೊಂದು ಬಿಟ್ಟರು. ಇದರಿಂದ ಕುಪಿತಗೊಂಡ ಇಡೀ ಬಿಷ್ನೋಯಿ ಸಮುದಾಯವು ಖೆಜ್ರಿ ಮರಗಳನ್ನು ರಕ್ಷಿಸಲು ರೊಚ್ಚಿಗೆದ್ದು, ಇದೇ ರೀತಿ ವಿರೋಧ ವ್ಯಕ್ತಪಡಿಸಿ ಪ್ರಾಣಬಿಟ್ಟರು.
ಈ ಮಾದರಿಯ ಪ್ರತಿಭಟನೆ ಮುಂದೆ ಆಧುನಿಕ ಭಾರತದ ಸುಂದರ್ ಲಾಲ್ ಬಹುಗುಣರವರ ಚಿಪ್ಕೋ ಮತ್ತು ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದ ಅಪ್ಪಿಕೋ ಚಳುವಳಿಗೆ ಮಾದರಿಯಾಯಿತು.
ಈಗ ರಾಜಸ್ಥಾನದಲ್ಲಿ ಅರಣ್ಯ ರಕ್ಷಣೆಯ ಹೊಣೆ ಈ ಸಮುದಾಯವೇ ವಹಿಸಿಕೊಂಡಿದೆ. ಪ್ರಕೃತಿ ಉಳಿಸುವಲ್ಲಿ ಜೊತೆಗೆ ಪ್ರಾಣಿಗಳನ್ನು ಉಳಿಸಲು ಈ ಸಮುದಾಯದವರು ಜೀವದಾನ ಮಾಡಲೂ ಕೂಡಾ ತಯಾರಾಗಿರುತ್ತಾರೆ. ಪ್ರಾಣಿಗಳ, ನಿಸರ್ಗದ ರಕ್ಷಣೆ ಮಾಡುವುದು ಇವರ ಗುರು ಜಂಬಾಜಿ ಆದೇಶ.