ಕರ್ಫ್ಯೂ ವೇಳೆ ಕ್ರಿಕೆಟ್ ಆಡಬಹುದೇ ಎಂಬ ಯುವಕನ ‘ಸಿಲ್ಲಿ ಪಾಯಿಂಟ್’ ಪ್ರಶ್ನೆಗೆ ಕ್ರಿಕೆಟ್ ಪರಿಭಾಷೆಯಲ್ಲೇ ‘ ಎಕ್ಟ್ರಾ ಕವರ್ ಪಡ್ಕೊಳ್ಳಿ ‘ ಎಂದು ಉತ್ತರಿಸಿದ ಪೊಲೀಸರು
ನವದೆಹಲಿ: ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತದ ಹಲವು ಕಡೆ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದೆ. ದೆಹಲಿ ಸರ್ಕಾರ ಸಹ ಇಂದಿನಿಂದ ವಾರಾಂತ್ಯದ ಕರ್ಫ್ಯೂವನ್ನು ವಿಧಿಸಿದೆ. ಪರಿಣಾಮ ಜನರಿಗೆ ಕರ್ಫ್ಯೂ ಬಗ್ಗೆ ಯಾವುದೇ ಅನುಮಾನವಿದ್ದರೂ ಟ್ವೀಟ್ ನಲ್ಲಿ ಕೇಳುವ ಅವಕಾಶವಿತ್ತು. ಅದಕ್ಕೆ ಯುವಕ ಪುನಿತ್ ಶರ್ಮಾ ಕರ್ಫ್ಯೂ ಸಮಯದಲ್ಲಿ ಕ್ರಿಕೆಟ್ ಆಡಬಹುದಾ? ಎಂದು ಪ್ರಶ್ನೆ ಕೇಳಿ ಸುದ್ದಿಯಾಗಿದ್ದಾನೆ.
ಆತನ ಪ್ರಶ್ನೆಗೆ ಕ್ರಿಕೆಟ್ ಪರಿಭಾಷೆಯಲ್ಲಿಯೇ ಉತ್ತರ ನೀಡಿದ್ದಾರೆ ಪೊಲೀಸರು.
ಪುನೀತ್ ವಾರಾಂತ್ಯದಲ್ಲಿ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಪ್ಲಾನ್ ಮಾಡಿಕೊಂಡಿದ್ದಾನೆ. ಆದರೆ ಈ ಕರ್ಫ್ಯೂನಿಂದ ಬೇಸರಗೊಂಡ ಆತ ನೇರವಾಗಿ ಪೊಲೀಸರಿಗೆ ಪ್ರಶ್ನೆಯನ್ನು ಟ್ವೀಟ್ ಮಾಡುವ ಮೂಲಕ ಕೇಳಿದ್ದಾನೆ. ಪುನೀತ್ ಈ ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ದೆಹಲಿಯಲ್ಲಿ ಕ್ರಿಕೆಟ್ ಆಡಬಹುದೇ? ಈ ವೇಳೆ ನಾವು ಕೋವಿಡ್ ಪ್ರೋಟೋಕಾಲ್ಗಳಾದ ಫೇಸ್ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಅನುಸರಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾನೆ.
ಈ ಪ್ರಶ್ನೆ ನೋಡಿದ ದೆಹಲಿ ಪೊಲೀಸರು ತಮಾಷೆಯಾಗಿ ಕ್ರಿಕೆಟ್ ಭಾಷೆಯಲ್ಲಿ ಉತ್ತರಿಸಿದ್ದು, ಇದೊಂದು ‘ಸಿಲ್ಲಿ ಪಾಯಿಂಟ್’ ಸರ್. ಈ ಸಮಯದಲ್ಲಿ ನಾವು ಇನ್ನಷ್ಟು ‘ ಎಕ್ಸ್ಟ್ರಾ ಕವರ್’ ನಲ್ಲಿ (ಎಚ್ಚರದಿಂದ) ಇರಬೇಕು. ಅಲ್ಲದೆ, ದೆಹಲಿ ಪೊಲೀಸರು ಕ್ಯಾಚಿಂಗ್ ನಲ್ಲಿ ಯಾವಾಗಲೂ ಬಲು ಹುಷಾರಾಗಿ ಸಿದ್ಧವಾಗಿರುತ್ತಾರೆ ಎಂದು ಟ್ವೀಟ್ ಗೆ ರಿಪ್ಲೈ ಮಾಡಿದ್ದಾರೆ.
ಒಂದು ವೇಳೆ ಜನರು ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಬಹಳ ಸೂಕ್ಷ್ಮವಾಗಿ ಟ್ವೀಟ್ ಮೂಲಕ ಪೊಲೀಸರು ಯುವಕನ ಜೊತೆಗೆ ಸಾಮಾನ್ಯರಿಗೂ ತಿಳಿಸಿದ್ದಾರೆ.