ಹಿಂದೂ ಪರ ಕಾನೂನು ಜಾರಿಗೆ ತಂದಾಗ ಕಾಂಗ್ರೆಸ್ ವಿರೋಧಿಸುತ್ತದೆ, ಇದು ಕಾಂಗ್ರೆಸ್ ಸಂಸ್ಕೃತಿ- ನಳಿನ್ ಕುಮಾರ್ ಕಟೀಲ್
ಸವಣೂರು : ಹಿಂದೂ ಪರ ಕಾನೂನು ಜಾರಿಗೆ ತಂದಾಗ ಕಾಂಗ್ರೆಸ್ ವಿರೋಧಿಸುತ್ತದೆ, ಇದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಸಂಸದ ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಕಡಬ ತಾಲೂಕಿನ ಸವಣೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದರು.
ಮತಾಂತರ ಕಾಯ್ದೆ ಜಾರಿ ಮಾಡಿದಾಗ ಕಾಂಗ್ರೆಸ್ ವಿರೋಧಿಸಿತ್ತು,ಇದೀಗ ದೇವಸ್ಥಾನಗಳಿಗೆ ಸ್ವಾಯತ್ತತೆ ತರುವ ವಿಚಾರದಲ್ಲೂ ಕಾಂಗ್ರೆಸ್ ವಿರೋಧಿಸುತ್ತದೆ.ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಆಚರಣೆ,ಶಾಧಿ ಭಾಗ್ಯ ಜಾರಿಗೆ ತಂದರು.ಇದು ಯಾರ ಸಂತೃಪ್ತಿಗೆ ತಂದ ಯೋಜನೆ ಎಂದು ಪ್ರಶ್ನಿಸಿದ ನಳಿನ್ ಕುಮಾರ್ ಅವರು ಕಾಂಗ್ರೆಸ್ ಗೆ ಹಿಂದೂಗಳ ಮತ ಬೇಡವೆಂದಾದರೆ ಬಹಿರಂಗವಾಗಿ ಹೇಳಲಿ ಎಂದರು.
ದೇವಸ್ಥಾನಕ್ಕೆ ಸ್ವಾಯತ್ತತೆ ದೊರಕಿದರೆ ಅಭಿವೃದ್ಧಿ ಕಾರ್ಯಗಳಿಗೆ ಸರಕಾರವನ್ನು ಕಾಯದೇ ದೇವಸ್ಥಾನದ ವತಿಯಿಂದ ನಡೆಸಲು ಅವಕಾಶವಿದೆ ಎಂದರು.
ಗೂಂಡ ಸಂಸ್ಕೃತಿ
ರಾಮನಗರದಲ್ಲಿ ಮುಖ್ಯಮಂತ್ರಿಗಳಿದ್ದ ಸಭೆಯಲ್ಲಿ ಸಚಿವರಿಗೆ ಹಲ್ಲೆ ನಡೆಸಲು ಮುಂದಾದ ಕಾಂಗ್ರೆಸ್ ಸಂಸದರ ನಡೆಯನ್ನು ಖಂಡಿಸಿದ ನಳಿನ್ ಕುಮಾರ್, ಕಾಂಗ್ರೆಸ್ ತನ್ನ ಗೂಂಡಾ ಸಂಸ್ಕೃತಿಯನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ,ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು,ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ,ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಮೊದಲಾದವರಿದ್ದರು.