ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿತೀರ್ಥ ಸ್ವಾಮೀಜಿ ಇದೀಗ ಆರೋಪ ಮುಕ್ತ | ಸೆಷನ್ಸ್ ನ್ಯಾಯಾಲಯ ನೀಡಿದ ತೀರ್ಪನ್ನೇ ಎತ್ತಿ ಹಿಡಿದ ಹೈಕೋರ್ಟ್
ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಹೊಸನಗರದ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿತೀರ್ಥ ಸ್ವಾಮೀಜಿ ಇದೀಗ ಆರೋಪ ಮುಕ್ತರಾಗಿದ್ದು, ಅವರ ವಿರುದ್ದ ಸಲ್ಲಿಕೆಯಾಗಿದ್ದ ಪ್ರಕರಣದ ಕುರಿತು ಸೆಷನ್ಸ್ ನ್ಯಾಯಾಲಯ ನೀಡಿದ ತೀರ್ಪನ್ನೇ ಎತ್ತಿ ಹಿಡಿದಿರುವ ಹೈಕೋರ್ಟ್ ರಾಘವೇಶ್ವರ ಸ್ವಾಮೀಜಿ ಅವರನ್ನು ಆರೋಪ ಮುಕ್ತರನ್ನಾಗಿಸಿ ಆದೇಶ ಹೊರಡಿಸಿದೆ.
ರಾಮಚಂದ್ರಾಪುರ ಮಠದ ರಾಮಕಥಾ ಕಾರ್ಯಕ್ರಮಕ್ಕೆ 2010 ರಲ್ಲಿ ಸೇರ್ಪಡೆಗೊಂಡಿದ್ದ ಗಾಯಕಿಯ ಮೇಲೆ ಸ್ವಾಮೀಜಿ ಅವರು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ರಾಮಕಥಾ ನಡೆದಿದ್ದ ಸುಮಾರು 160 ಕಡೆಗಳಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಹೇಳಲಾಗಿತ್ತು. ಈ ಕುರಿತು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಐಡಿ ಅಧಿಕಾರಿಗಳು ಸುದೀರ್ಘ ತನಿಖೆಯನ್ನು ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದರು.
ಅತ್ತ ಮಠದ ಭಕ್ತೆಯೋರ್ವರು ಕೂಡ ಸ್ವಾಮೀಜಿ ವಿರುದ್ದ ಅತ್ಯಾಚಾರದ ಆರೋಪ ಮಾಡಿದ್ದರು. ತಾನು ಬಾಲಕಿಯಾಗಿದ್ದ ಸಂದರ್ಭದಲ್ಲಿ ತನ್ನ ಮೇಲೆ ಸ್ವಾಮೀಜಿ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಸೇರಿದಂತೆ ಒಟ್ಟು ಏಳು ಜನರ ವಿರುದ್ದ ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದರು. ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ವಿರುದ್ದ ಕೇಳಿ ಬಂದಿರುವ ಅತ್ಯಾಚಾರ ಆರೋಪ ಪ್ರಕರಣ ದೇಶದಾದ್ಯಂತ ಸುದ್ದಿ ಆಗಿತ್ತು. ಅತ್ಯಾಚಾರ ಆರೋಪ ಕೇಳಿ ಬಂದು ಆರು ವರ್ಷಗಳ ನಂತರ ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ತೀರ್ಪು ನೀಡಿದೆ. ಸ್ವಾಮೀಜಿ ಆರೋಪ ಮುಕ್ತರಾಗಿ ಹೊರಗೆ ಬಂದಿದ್ದಾರೆ.
ಹೊಸನಗರದ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ತೀರ್ಥ ಸ್ವಾಮೀಜಿ ಅವರ ವಿರುದ್ದ ರಾಮಕಥಾ ಗಾಯಕಿ ಓರ್ವರು ದಾಖಲಿಸಿದ್ದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ಸೆಷನ್ಸ್ ನ್ಯಾಯಾಲಯ ಸ್ವಾಮೀಜಿ ಅವರನ್ನು ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿತ್ತು. ಅಲ್ಲದೇ ಸ್ವಾಮೀಜಿ ವಿರುದ್ದದ ಅತ್ಯಾಚಾರ ಆರೋಪ ಸಾಬೀತುಪಡಿಸಲು ಯಾವುದೇ ಸೂಕ್ತ ಸಾಕ್ಷಾಧಾರಗಳಿಲ್ಲ. ಅಲ್ಲದೇ ತನಿಖೆ ನಡೆಸಿರುವ ಸಿಐಡಿ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲೂ ಆರೋಪ ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಸೆಷನ್ಸ್ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಆಗ ಅತ್ಯಾಚಾರ ಪ್ರಕರಣವನ್ನು ನ್ಯಾಯಾಲಯ ರದ್ದು ಪಡಿಸಿತ್ತು. ಈ ಹಿನ್ನೆಲೆಯಲ್ಲಿ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಗಾಯಕಿ ಸಿಐಡಿ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ನಡೆಸಿರುವ ಹೈಕೋರ್ಟ್, ಈ ಹಿಂದೆ ಸೆಷನ್ಸ್ ಕೋರ್ಟ್ ನೀಡಿರುವ ಆದೇಶವನ್ನು ಪುರಸ್ಕರಿಸಿದೆ. ಸೆಷನ್ಸ್ ನ್ಯಾಯಾಲಯ ನೀಡಿರುವ ತೀರ್ಪನಲ್ಲಿ ಮತ್ತೆ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ರಕರಣದ ವಿಚಾರಣೆಯನ್ನು ನಡೆಸಿರುವ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.