ಯಜಮಾನನ ರಕ್ಷಣೆಗಾಗಿ ಹಾವನ್ನು ಕೊಂದು ತನ್ನ ಪ್ರಾಣವನ್ನೇ ಕಳೆದುಕೊಂಡ ಸಾಕು ನಾಯಿ
ಮನುಷ್ಯರ ಮೇಲೆ ಪ್ರೀತಿ, ವಿಶ್ವಾಸ ಇಡುವುದಕ್ಕಿಂತ ಸಾಕು ನಾಯಿಯ ಮೇಲೆ ಇಟ್ಟರೆ ಅದು ಎಂದೂ ನಮ್ಮನ್ನು ಬಿಟ್ಟುಕೊಡೋದಿಲ್ಲವೆಂಬುದು ವಾಸ್ತವದ ಮಾತು.ಹೌದು. ಮೂಕ ಪ್ರಾಣಿಗಳಿಗೂ ಬಾಂಧವ್ಯ ಇದೆ. ತನ್ನನ್ನು ಸಾಕಿದ ಯಜಮಾನನಿಗೆ ಶ್ವಾನ ಯಾವಾಗಲೂ ನಿಯತ್ತಿನಿಂದ ಇರುತ್ತದೆ ಎಂಬುದು ಅನೇಕ ಸಲ ಸಾಬೀತುಗೊಂಡಿದೆ.ಇದೀಗ ಇದೇ ರೀತಿಯ ಮನ ಉಕ್ಕಿಬರುವ ಘಟನೆ ಇಲ್ಲೊಂದು ಕಡೆ ನಡೆದಿದೆ.
ಹೌದು.ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ನಿಂದಿಗಾಮದಲ್ಲಿ ಈ ಘಟನೆ ನಡೆದಿದೆ.ಮುರುಳಿ ಎಂಬ ವ್ಯಕ್ತಿ ತಮ್ಮ ಫಾರ್ಮ್ಹೌಸ್ನಲ್ಲಿ ಕಳೆದ ಆರು ವರ್ಷಗಳಿಂದ ರೋಟ್ವಿಲರ್ ಎಂಬ ತಳಿಯ ಎರಡು ನಾಯಿ ಮರಿ ಸಾಕಿದ್ದು, ಅದರಲ್ಲಿ ಒಂದು ಹೆಣ್ಣು ಮತ್ತೊಂದು ಗಂಡು ಇದೆ.ಎರಡು ದಿನಗಳ ಹಿಂದೆ ಮುರಳಿ ಮಲಗುವ ಕೋಣೆಯೊಳಗೆ ಹಾವೊಂದು ನುಗ್ಗಿದ್ದು,ಅದರ ಹುಡುಕಾಟ ನಡೆಸಿದ್ರೂ ಹಾವು ಪತ್ತೆಯಾಗಿಲ್ಲ. ಹೀಗಾಗಿ ಮುರಳಿ ಫಾರ್ಮ್ಹೌಸ್ನಿಂದ ಹೊರಟು ಹೋಗಿದ್ದಾರೆ.
ತನಗೆ ಅನ್ನ ಹಾಕಿದ ಮಾಲೀಕ ಹಾವು ಪತ್ತೆಯಾಗದೆ ಮನೆಯಿಂದ ಹೊರ ಹೋಗಿದ್ದನ್ನು ಕಂಡು ನಾಯಿ ಕೂಡ ಹಾವಿನ ಹುಡುಕಾಟ ನಡೆಸಿದೆ.ಕೆಲ ಗಂಟೆಗಳ ನಂತರ ಮುರುಳಿ ತೋಟದ ಮನೆಗೆ ವಾಪಸ್ ಆಗಿದ್ದು, ಈ ವೇಳೆ ಗಂಡು ನಾಯಿ ಹಾವನ್ನ ಕೊಂದು ತಾನೂ ಸತ್ತು ಬಿದ್ದಿರುವುದನ್ನ ನೋಡಿದ್ದಾರೆ. ನಾಯಿಯ ಈ ನಿಯತ್ತಿನ ಕೆಲಸಕ್ಕೆ ಜನ ಖುಷಿ ಪಟ್ಟಿದ್ದಾರೆ. ಅಲ್ಲದೆ ಇಷ್ಟು ಒಳ್ಳೆಯ ನಾಯಿಯ ಸಾವಿಗೆ ಮುರುಳಿ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.ಜೊತೆಗೆ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮುರಳಿ, 2017ರಿಂದಲೂ ಫಾರ್ಮ್ಹೌಸ್ನಲ್ಲಿ ಎರಡು ನಾಯಿ ಮರಿ ಸಾಕಿದ್ದು, ಅವುಗಳಿಗೆ ಕೈಸರ್ ಹಾಗೂ ಫ್ಲೋರಾ ಎಂದು ಹೆಸರಿಡಲಾಗಿತ್ತು. ಕಳೆದ ಎರಡು ದಿನಗಳ ಹಿಂದೆ ನಾನು ಮಲಗುವ ಕೋಣೆಯಲ್ಲಿ ಹಾವು ನುಗ್ಗಿದೆ. ಎಷ್ಟು ಹುಡುಕಿದರೂ ಅದು ಸಿಕ್ಕಿರಲಿಲ್ಲ, ಆದರೆ, ನಾಯಿ ಅದನ್ನ ಹುಡುಕಿ ಕೊಂದು ಹಾಕಿದ್ದು, ಈ ವೇಳೆ ಕಡಿತಕ್ಕೊಳಗಾಗಿ ತನ್ನ ಪ್ರಾಣ ಸಹ ಕಳೆದುಕೊಂಡಿದೆ ಎಂದು ದುಃಖ ವ್ಯಕ್ತಪಡಿಸಿದರು.