ಮಿಸ್ ಕಾಲ್ ಕೊಡಿ, ನೇತ್ರದಾನ ಮಾಡಿ !! | ಪುನೀತ್ ಪ್ರೇರಿತ ನೇತ್ರದಾನಕ್ಕೆ ಹೆಸರು ನೋಂದಾವಣೆ ಆಂದೋಲನ ಶುರು
ಪುನೀತ್ ರಾಜ್ ಕುಮಾರ್ ಕರುನಾಡು, ಸ್ಯಾಂಡಲ್ ವುಡ್ ಮರೆಯಲಾಗದ ಮಾಣಿಕ್ಯ. ಕಾಯ ಅಳಿದರೂ ಕೀರ್ತಿ ಉಳಿಸಿಕೊಂಡ ರಿಯಲ್ ಹೀರೋ. ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಎರಡು ತಿಂಗಳು ಕಳೆದಿದ್ದರೂ ಇನ್ನೂ ಪುನೀತ್ ಅಪ್ಪುವಾಗಿ ಮನೆಮಗನಂತೆ ನಾಡಿನ ಮನೆ ಮನೆಯಲ್ಲೂ ಜೀವಂತವಾಗಿದ್ದಾರೆ.
ನಿನ್ನೆ ಪುನೀತ್ ಎರಡನೇ ತಿಂಗಳ ಪುಣ್ಯತಿಥಿ ನಡೆದಿದ್ದು, ಕುಟುಂಬಸ್ಥರೆಲ್ಲ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ನೇತ್ರದಾನಕ್ಕೆ ಪ್ರೇರೇಪಿಸುವ ಅಪರೂಪದ ಪ್ರಯತ್ನವೊಂದು ನಡೆದಿದೆ.
ಹೌದು, ಪುನೀತ್ ನಿಧನದ ಬಳಿಕ ರಾಜ್ಯದಲ್ಲಿ ನೇತ್ರದಾನದ ಬಗ್ಗೆ ವಿಶೇಷ ಆಸಕ್ತಿ ಹೆಚ್ಚಿದೆ. ಆದರೆ ಈಗ ಕೊರೋನಾ ಮತ್ತೆ ಹೆಚ್ಚುತ್ತಿರುವುದರಿಂದ ಜನರು ದೈಹಿಕವಾಗಿ ಆಸ್ಪತ್ರೆಗೆ ಭೇಟಿ ನೀಡುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ಮಿಸ್ ಕಾಲ್ ನೀಡಿ ನೇತ್ರದಾನಕ್ಕೆ ನೋಂದಣಿ ಮಾಡುವ ಸಹಾಯವಾಣಿಯನ್ನು ಲೋಕಾಪರ್ಣೆಗೊಳಿಸಲಾಗಿದೆ. 8884018800 ದೂರವಾಣಿಗೆ ಮಿಸ್ ಕಾಲ್ ಕೊಟ್ಟರೇ, ನೇತ್ರದಾನದ ಫಾರ್ಂ ನಿಮಗೆ ಸಿಗುತ್ತದೆ. ಅದನ್ನು ತುಂಬುವ ಮೂಲಕ ನೀವು ನೇತ್ರದಾನಕ್ಕೆ ರಿಜಿಸ್ಟರ್ ಮಾಡಿಕೊಳ್ಳಬಹುದು. ಇದರ ಜೊತೆಗೆ ನೇತ್ರದಾನದ ಸರ್ಟಿಫಿಕೇಟ್ ಕೂಡ ನೀಡಲಾಗುತ್ತದೆ.
ಈ ಬಗ್ಗೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ಪುನೀತ್ ನಿಧನದ ಬಳಿಕ ನೇತ್ರದಾನದ ಬಗ್ಗೆ ಜಾಗೃತಿ ಮೂಡಿರುವುದು ಉತ್ತಮ. ಇದನ್ನು ನಾವೆಲ್ಲರೂ ಪಾಲಿಸಬೇಕು. ನಾವು ನೇತ್ರದಾನ ಮಾಡುವುದು ಮಾತ್ರವಲ್ಲ. ಈ ವಿಚಾರವನ್ನು ತಮ್ಮವರಿಗೆ ತಿಳಿಸಿರಬೇಕು. ಇದರಿಂದ ನಿಧನ ವೇಳೆ ನೇತ್ರದಾನಕ್ಕೆ ಅನುಕೂಲವಾಗಲಿದೆ ಎಂದರು. ನೇತ್ರದಾನಕ್ಕೆ ಮಿಸ್ ಕಾಲ್ ಅಭಿಯಾನದ ವೇಳೆ ನಾರಾಯಣ ನೇತ್ರಧಾಮದ ಡಾ.ಭುಜಂಗ ಶೆಟ್ಟಿ ಪಾಲ್ಗೊಂಡಿದ್ದರು.