ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಒಟ್ಟು ಒಂದು ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲಸಿಕೆ ನೀಡಲು ಕ್ಷಣಗಣನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಜ. 3ರಿಂದ ಕೋವಿಡ್ ಲಸಿಕೆ ನೀಡಲು ಪಟ್ಟಿ ಸಿದ್ಧಪಡಿಸಿ ಶಿಬಿರ ಆಯೋಜಿಸುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಜಿಲ್ಲಾ ಆರೋಗ್ಯ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಯವರು ತಮ್ಮ ಕಚೇರಿಯಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ 1,01,549 ಮಕ್ಕಳಿದ್ದು ಅವರಿಗೆ ಕೋವ್ಯಾಕ್ಸಿನ್ ಮಾತ್ರ ನೀಡಲಾಗುವುದು. ಆಯಾ ಶಾಲೆ-ಕಾಲೇಜುಗಳಲ್ಲಿ ಸ್ಥಳೀಯ ಪ್ರಾ.ಆ.ಕೇಂದ್ರದ ಲಸಿಕಾ ತಂಡದ ಮೂಲಕ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ಆ ಸಂದರ್ಭದಲ್ಲಿ ಮಕ್ಕಳ ಕೋವಿಡ್ ಲಸಿಕಾಕರಣ ಕುರಿತು ಶಾಲಾ-ಕಾಲೇಜುಗಳಲ್ಲಿ ಪೋಷಕ-ಶಿಕ್ಷಕ ಸಮಿತಿಯ ಸಭೆ ಕರೆದು ಮಾಹಿತಿ ನೀಡುವಂತೆಯೂ ಸೂಚಿಸಿದರು.
ಕೋವಿಡ್ ಲಸಿಕೆಯ ಉಪಯುಕ್ತತೆಯ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವಂತೆ ಹಾಗೂ ಮುಂದಿನ ದಿನಗಳಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೂ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವಿದ್ದು ಈ ಬಗ್ಗೆ ಪ್ರಚಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆಂಜನಪ್ಪ ಅವರಿಗೆ ಸೂಚಿಸಿದರು.
ಜಿ.ಪಂ. ಸಿಇಒ ಡಾ| ಕುಮಾರ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಡಿಎಚ್ಒ ಡಾ| ಕಿಶೋರ್ ಕುಮಾರ್, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ| ರಾಜೇಶ್, ಡಿಡಿಪಿಐ ಡಾ| ಮಲ್ಲೇಸ್ವಾಮಿ, ಕೋವಿಡ್ ನೋಡಲ್ ಅಧಿಕಾರಿ ಡಾ| ಅಶೋಕ್, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ| ಸುಜಯ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು, ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯಲ್ಲಿದ್ದರು.
ಜಿಲ್ಲಾ ವಕ್ಫ್ ಅಧಿಕಾರಿ ಅಬುಬಕ್ಕರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.