ಸರ್ವೆ : ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ-ಧಾರ್ಮಿಕ ಸಭೆ | ಜಗತ್ತು ಸತ್ಯ-ಧರ್ಮದ ಹಾದಿಯಲ್ಲಿ ನಡೆಯುತ್ತಿದೆ-ಒಡಿಯೂರು ಶ್ರೀ
ಪುತ್ತೂರು : ಜಗತ್ತು ಸತ್ಯ ಮತ್ತು ಧರ್ಮದ ಹಾದಿಯಲಿ ನಡೆಯುತ್ತಿದ್ದು ಸತ್ಯ, ಧರ್ಮ ಹಾದಿ ತಪ್ಪಿದರೆ ವಿನಾಶ ಖಚಿತ ಎಂದು ಒಡಿಯೂರು ಶ್ರೀಬಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಬಳಿಕ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಧರ್ಮ ಮತ್ತು ಸಂಸ್ಕಾರ ಒಂದಕ್ಕೊಂದು ಪೂರಕವಾಗಿದ್ದು ದೇವಾಲಯದಲ್ಲಿ ನಡೆಯುವ ಬ್ರಹ್ಮಕಲಶ ನಮ್ಮ ಸಂಸ್ಕೃತಿಯನ್ನು ಪೂರಕವಾಗಿ ಬೆಳೆಸಲು ಸಹಕಾರಿಯಾಗುತ್ತದೆ. ಧರ್ಮ ತುಳು ಮಣ್ಣಿನ ಮಹಿಮೆಯಾಗಿದ್ದು ತುಳು ನಾಡು ಸಂಸ್ಕೃತಿಯ ನಾಡು, ಮಾತೆಯರು, ಯುವಜನರ ಜಾಗೃತಿಯಿಂದ ಭವ್ಯ ಭಾರತ ನಿರ್ಮಿಸಲು ಸಾಧ್ಯ ಎಂದರು.
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು ಮಾತನಾಡಿ ದೇವಾಲಯ ನಿರ್ಮಾಣ, ಬ್ರಹ್ಮ ಕಲಶ ಇವೆಲ್ಲವು ಪುಣ್ಯದ ಕಾರ್ಯ, ಇವೆಲ್ಲವುಗಳ ಜವಾಬ್ದಾರಿ ಹೊತ್ತವರ ಪರಿಶ್ರಮ ಎಷ್ಟೆಂದು ನನಗೆ ಗೊತ್ತಿದೆ ಹಾಗಾಗಿಯೇ ಸಮಯಕ್ಕಿಂತ ಮುಂಚಿತವಾಗಿಯೇ ಇಲ್ಲಿಗೆ ಬಂದಿದ್ದೇನೆ. ನಾಯಕತ್ವ ಇದ್ದರೆ ಊರು ಅಭಿವೃದ್ಧಿಯಾಗುತ್ತದೆ ಎಂದು ಅವರು ಹೇಳಿದರು.
ಕುಕ್ಕಿನಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮೋನಪ್ಪ ಕರ್ಕೇರ ಮಾತನಾಡಿ, ದೇವಸ್ಥಾನದ ಪುಣ್ಯ ಕಾರ್ಯಗಳಿಗೆ ಮವಪೂರ್ವಕವಾಗಿ ಸಹಕಾರ ನೀಡಿದರೆ ಮಾತ್ರ ಅದನ್ನು ದೇವರು ಮೆಚ್ಚುತ್ತಾನೆ, ನಮ್ಮ ಸ್ವಾರ್ಥ ಬಿಟ್ಟು ದೇವರ ಸಂಪ್ರೀತಿ ಗಳಿಸುವುದೇ ನಮ್ಮ ಉದ್ದೇಶವಾಗಬೇಕು ಎಂದು ಅವರು ಹೇಳಿದರು.
ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಳ ಹಾಗೂ ನಿವೃತ್ತ ದೈ.ಶಿ.ಶಿ ಪಡ್ಡಂಬಲುಗುತ್ತು ಗಂಗಾಧರ್ ರೈ ತುಂಗರಕೋಡಿ ಮಾತನಾಡಿದರು.
ದೇವಸ್ಥಾನಗಳು ನಮ್ಮನ್ನು ಒಗ್ಗೂಡಿಸುತ್ತದೆ-ಮಠಂದೂರು
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ ದೇವಸ್ಥಾನ, ದೈವಸ್ಥಾನ, ನಾಗಸ್ಥಾನಗಳು ಪಾರಂಪರಿಕವಾಗಿ ನಮ್ಮನ್ನು ಒಗ್ಗೂಡಿಸುವ ಕೇಂದ್ರಗಳಾಗಿದ್ದು ಆಧ್ಯಾತ್ಮಿಕ ವಿಚಾರದಲ್ಲಿ ನಮ್ಮ ದೇಶವನ್ನು ಜಗತ್ತೇ ನೋಡುತ್ತಿದೆ, ಇಲ್ಲಿನ ಋಷಿ ಪರಂಪರೆ ಮತ್ತು ಕೃಷಿ ಪರಂಪರೆ ನಮ್ಮ ಖುಷಿಗೆ ಮೂಲ ಕಾರಣ ಎಂದು ಹೇಳಿದರು.
ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿರುವ ಕಾರಣಕ್ಕೆ ಮತ್ತು ಲವ್ ಜಿಹಾದ್ ಸೇರಿದಂತೆ ಅನ್ಯ ವಿಚಾರಗಳಲ್ಲಿ ಮತಾಂತರ ಆಗುತ್ತಿದೆ. ಈ ಕಾರಣಕ್ಕೆ ಸರಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದೆ ಅಲ್ಲದೇ ಗೋವುಗಳ ಸಂರಕ್ಷಣೆಗಾಗಿ ಗೋ ಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಸರಕಾರ ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಸೊರಕೆ ಮಾತನಾಡಿ, ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಪುನರ್ನಿರ್ಮಾಣ, ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಕಾರ್ಯದ ಅವಕಾಶ ನಾನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷನಾಗಿರುವ ಅವಧಿಯಲ್ಲಿ ಸಿಕ್ಕಿರುವುದು ನನ್ನ ಪಾಲಿನ ಸೌಭಾಗ್ಯವಾಗಿದೆ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಮಾತನಾಡಿ ,ದೇವಸ್ಥಾನದ ಪುನರ್ನಿರ್ಮಾಣ, ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಇನ್ನಿತರ ಎಲ್ಲಾ ಕಾರ್ಯಗಳು ಎಲ್ಲರ ಸಹಕಾರದಿಂದ ಉತ್ತಮವಾಗಿ ನಡೆದಿದೆ. ದೇವಸ್ಥಾನದ ಕಾರ್ಯಗಳನ್ನು ಅಚ್ಚುಕಟ್ಟಾಗಿ, ಉತ್ತಮವಾಗಿ ಮಾಡಿರುವ ಆತ್ಮ ಸಂತೃಪ್ತಿ ನನಗಿದೆ ಎಂದು ಹೇಳಿದರು.
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು ಹಾಗೂ ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಳ ಅವರನ್ನು ದೇವಸ್ಥಾನದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ 15 ಸೆಂಟ್ಸ್ ಜಾಗವನ್ನು ಬಿಟ್ಟು ಕೊಟ್ಟ ಪದ್ಮಾವತಿ ರೈ ಸರ್ವೆ ಅವರನ್ನು ದೇವಸ್ಥಾನದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ದೇವಸ್ಥಾನದ ಜೀಣೋಧ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಸೊರಕೆ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಆನಂದ ಭಂಡಾರಿ ಸೊರಕೆ, ಕಾರ್ಯದರ್ಶಿಗಳಾದ ಅಶೋಕ್ ನಾಯ್ಕ ಸೊರಕೆ, ವಸಂತ ರೈ ಸೊರಕೆ, ಪ್ರಧಾನ ಅರ್ಚಕ ಶ್ರೀರಾಮ ಕಲ್ಲೂರಾಯ ಅವರನ್ನು ಆರ್ಥಿಕ ಸಮಿತಿ ಸಂಚಾಲಕ ಜಿ.ಕೆ ಪ್ರಸನ್ನ ಕಲ್ಲಗುಡ್ಡೆ ಅವರ ವೈಯಕ್ತಿಕ ನೆಲೆಯಲ್ಲಿ ಸನ್ಮಾನಿಸಲಾಯಿತು.
ಪ್ರಹ್ಲಾದ್ ರಾವ್ ಮೈಸೂರು, ಕಣಕ್ಕೂರು ವಿಶ್ವನಾಥ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮೋಹನ್ ರೈ ಓಲೆಮುಂಡೋವು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷೆ ನಳಿನಿ ಲೋಕಪ್ಪ ಗೌಡ ಕರೆಮನೆ, ಅಧ್ಯಕ್ಷ ಲೋಕಪ್ಪ ಗೌಡ ಕರೆಮನೆ, ಕಾರ್ಯಾಧ್ಯಕ್ಷ ವಿಜಯಕುಮಾರ್ ರೈ ಸರ್ವೆ, ಪ್ರ.ಕಾರ್ಯದರ್ಶಿ ಚಂದ್ರಶೇಖರ್ ಎನ್ಎಸ್ಡಿ ಸರ್ವೆದೋಳಗುತ್ತು, ಆರ್ಥಿಕ ಸಮಿತಿ ಸಂಚಾಲಕ ಜಿ.ಕೆ ಪ್ರಸನ್ನ ಕಲ್ಲಗುಡ್ಡೆ, ಪುಣೆ ತುಳುಕೂಟದ ನಿಕಟಪೂರ್ವ ಅಧ್ಯಕ್ಷ ತಾರನಾಥ ರೈ ಮೇಗಿನಗುತ್ತು, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರ.ಕಾರ್ಯದರ್ಶಿ ಆನಂದ ಪೂಜಾರಿ ಸರ್ವೆದೋಳಗುತ್ತು, ಕಾರ್ಯಾಧ್ಯಕ್ಷ ಆನಂದ ಭಂಡಾರಿ ಸೊರಕೆ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ನಾರಾಯಣ ನಾಯ್ಕ ನೆಕ್ಕಿತ್ತಡ್ಕ, ಜೀರ್ಣೋದ್ಧಾರ ಸಮಿತಿ ಗೌರವ ಸಲಹೆಗಾರರಾದ ಮೋಹನ್ ಕಲ್ಲೂರಾಯ ಬಿಡದಿ, ರತ್ನಾಕರ ರೈ(ಮುಂಬೈ) ಮೇಗಿನಗುತ್ತು, ವ್ಯವಸ್ಥಾಪನಾ ಸಮಿತಿ ಸದಸ್ಯ ವಿಶ್ವನಾಥ ರೈ (ಮುಂಬೈ) ಮೇಗಿನಗುತ್ತು, ಮುಂಡೂರು ಗ್ರಾ.ಪಂ ಸದಸ್ಯೆ ರಸಿಕ ರೈ ಮೇಗಿನಗುತ್ತು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ರಾಧಾಕೃಷ್ಣ ರೈ ರೆಂಜಲಾಡಿ ವಂದಿಸಿದರು. ಶಿಕ್ಷಕಿ ಪುಷ್ಪಾ ಮತ್ತು ಬಳಗದವರು ಕಾರ್ಯಕ್ರಮ ನಿರೂಪಿಸಿದರು.
ಬಲಿ ಉತ್ಸವ-ಸುಡುಮದ್ದು ಪ್ರದರ್ಶನ
ದೇವಳದಲ್ಲಿ ಪ್ರಥಮ ಬಾರಿಗೆ ದೇವರ ಬಲಿ ಉತ್ಸವ ನಡೆಯಿತು. ಸಾವಿರಾರು ಮಂದಿ ಬಲಿ ಉತ್ಸವವನ್ನು ಕಣ್ತುಂಬಿಕೊಡರು. ಮೋಹನ್ ರೈ ಓಲೆಮುಂಡೋವು ಪ್ರಾಯೋಜಕತ್ವದಲ್ಲಿ ಸರ್ವೆ ಬೆಡಿ ಸುಡುಮದ್ದು ಪ್ರದರ್ಶನ ನಡೆಯಿತು. ಬಾನಂಗಳದಲ್ಲಿ ರಂಗಿನ ಚಿತ್ತಾರಕ್ಕೆ ಗ್ರಾಮದ ಜನರು ಖುಷಿ ಪಟ್ಟರು.