ಒಂದೂವರೆ ಕ್ಲಾಸ್ ಕಲಿತಿದ್ದರೂ, ಇವರು ಮಾಡುತ್ತಾರೆ ಡಾಕ್ಟರೇಟ್ ಗಳಿಗೆ ಪಾಠ !! | ಬರೋಬ್ಬರಿ 52 ದೇಶ ಸುತ್ತಾಡಿದ ನಮ್ಮ ಉಡುಪಿಯ ಮೇಷ್ಟ್ರ ಬಗ್ಗೆ ಹೀಗೊಂದು ವರದಿ
ವಿದೇಶಗಳಿಗೆ ಹೋಗುವವರೆಂದರೆ ಭಾರೀ ಭಾರೀ ಕಲಿತವರು ಅಥವಾ ಸಿರಿವಂತರು ಎಂಬ ಕಲ್ಪನೆ ಇದೆ. ಉಡುಪಿ ಎಂಜಿಎಂ ಯಕ್ಷಗಾನ ಕೇಂದ್ರದ ಪ್ರಾಂಶುಪಾಲ ಸಂಜೀವ ಸುವರ್ಣರದ್ದು ಇದಕ್ಕೆ ತದ್ವಿರುದ್ಧ. ಇವರು ಕಲಿತದ್ದು ಒಂದೂವರೆ ತರಗತಿ, ಸುತ್ತಾಡಿದ ಒಟ್ಟು ದೇಶಗಳ ಸಂಖ್ಯೆ ಬರೋಬ್ಬರಿ 52.
1955ರಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗದಲ್ಲಿ ಜನಿಸಿದ ಬನ್ನಂಜೆ ಸಂಜೀವ ಸುವರ್ಣರು ಶಿಕ್ಷಣವನ್ನು ಅನಿವಾರ್ಯವಾಗಿ ನಿಲ್ಲಿಸ ಬೇಕಾಯಿತು. ಗುಂಡಿಬೈಲು ನಾರಾಯಣ ಶೆಟ್ಟಿ, ಮೆಟ್ಕಲ್ ಕೃಷ್ಣಯ್ಯ ಶೆಟ್ಟಿ, ಮಾರ್ಗೋಳಿ ಗೋವಿಂದ ಸೇರೆಗಾರ್ ಅವರಲ್ಲಿ ವಿವಿಧ ಸ್ತರಗಳ ಯಕ್ಷಗಾನ ಪಾಠ ಕಲಿತ ಅವರು 1978ರಲ್ಲಿ ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಬಿ.ವಿ.ಕಾರಂತರ ನಾಟಕಕ್ಕೆ ಸಹಾಯಕರಾಗಿ ರಂಗಭೂಮಿ ಅನುಭವ ಪಡೆದುಕೊಂಡರು. 1971 ರಲ್ಲಿ ಎಂಜಿಎಂ ಕಾಲೇಜಿನ ನೇತೃತ್ವದಲ್ಲಿ ಯಕ್ಷಗಾನ ಕೇಂದ್ರ ಆರಂಭಗೊಂಡಾಗ ರಾತ್ರಿಯ ತರಗತಿಗೆ ಸೇರಿಕೊಂಡು ಶುಲ್ಕಕ್ಕಾಗಿ ಹೊಟೇಲ್ ಕೆಲಸ ಮಾಡಿದರು. 1973ರಲ್ಲಿ ಹಗಲಿನಲ್ಲಿ ಯಕ್ಷಗಾನ ಕಲಿಕೆಗೆ ಸೇರಿಕೊಂಡು ಉಳಿದ ಸಮಯದಲ್ಲಿ ಹೊಟೇಲ್ ಕೆಲಸದಲ್ಲಿ ತೊಡಗಿಕೊಂಡರು. ಆಗಲೇ ಕೇಂದ್ರದಲ್ಲಿದ್ದ ಯಕ್ಷಗಾನದ ದಿಗ್ಗಜ ಮಟಪಾಡಿ ವೀರಭದ್ರ ನಾಯಕರ ಮಾರ್ಗದರ್ಶನ ಸುವರ್ಣರಿಗೆ ದೊರಕಿ ಜ್ಞಾನದ ಬಾಗಿಲು ತೆರೆಯಿತು. 1982ರಲ್ಲಿ ಇದೇ ಕೇಂದ್ರದಲ್ಲಿ ಕೆಲಸಕ್ಕೆ ಸೇರಿ ಯಕ್ಷಗಾನದ ತಿರುಗಾಟದಲ್ಲಿ ಪೆಟ್ಟಿಗೆ ಹೊರು ವುದು, ಪರದೆ ಹಿಡಿಯುವುದರಿಂದ ಹಿಡಿದು ಎಲ್ಲ ಬಗೆಯ ಕೆಲಸಗಳನ್ನೂ ಮಾಡಿದರು. 2004ರಿಂದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜರ್ಮನಿಗೆ ಹೋಗುವಾಗ ಬಂದ ಚಪ್ಪಲಿ: 1982ರಲ್ಲಿ ಇವರ ಮೊದಲ ವಿದೇಶ ಭೇಟಿ ಜರ್ಮನಿಗೆ. ಆಗ ನೃತ್ಯಗಾರ್ತಿ ಮಾಯಾ ರಾವ್ ಅವರು ಮಹಾಬಲ ಹೆಗಡೆ, ಬಿರ್ತಿ ಬಾಲಕೃಷ್ಣರನ್ನು ಕರೆದೊಯ್ಯುವಾಗ ಬಾಲಕೃಷ್ಣರು ಸುವರ್ಣರನ್ನೂ ಕರೆದೊಯ್ದರು. ಜರ್ಮನಿಗೆ ಹೋಗುವಾಗ ಚಪ್ಪಲಿ ಬೇಕಲ್ಲವೆ? ಚಪ್ಪಲಿ ತೆಗೆಸಿಕೊಟ್ಟವರು ಮಾಯಾ ರಾವ್ ಗಂಡ ನಟರಾಜ್. ಡಾ| ಶಿವರಾಮ ಕಾರಂತರು ಯಕ್ಷಗಾನ ಕೇಂದ್ರ ಆರಂಭಕ್ಕೆ ಪ್ರಮುಖ ಕಾರಣೀಭೂತರು. ಯಕ್ಷಗಾನ ಕಲೆಯು ಸಾಗರೋತ್ತರ ಮೆರೆಯಲು ಕಾರಣ ಕಾರಂತರೆಂದರೆ ತಪ್ಪಲ್ಲ. ಕಾರಂತರಿಗೆ ಆಪ್ತರಾಗಿದ್ದ ಸುವರ್ಣರು ಅವರ ಯಕ್ಷ ತಂಡದೊಂದಿಗೆ ಜರ್ಮನಿ, ರಷ್ಯಾ, ಹಂಗೇರಿ, ಬಲ್ಗೇರಿಯಾ, ಈಜಿಪ್ಟ್, ಲ್ಯಾಟಿನ್ ಅಮೆರಿಕ, ಬ್ರೆಜಿಲ್ ಮೊದಲಾದ ರಾಷ್ಟ್ರಗಳನ್ನು ಸುತ್ತಾಡಿ ದರು. ತೀರಾ ಇತ್ತೀಚಿಗೆ ಭೇಟಿ ಕೊಟ್ಟ ವಿದೇಶ ಫ್ರಾನ್ಸ್.
ಪ್ರಯೋಗಶೀಲತೆ: ಸುವರ್ಣರು 52 ದೇಶಗಳಿಗೆ ಭೇಟಿ ಕೊಟ್ಟದ್ದು ಮಾತ್ರವಲ್ಲ, ಜರ್ಮನಿಯ ಕ್ಯಾಥ್ರಿನ್ ಎಂಬ ವಿದ್ಯಾರ್ಥಿಗೆ ಯಕ್ಷಗಾನ ಕಲಿಸಿಕೊಟ್ಟರು, ಆಕೆ ಯಕ್ಷಗಾನದಲ್ಲಿ ಡಾಕ್ಟರೆಟ್ ಪದವಿ ಗಳಿಸಿದಳು. ಇಟಲಿಯ ಬ್ರೂನಾ, ಫ್ರಾನ್ಸ್ನ ಹೆರಿಕ್ ಹೀಗೆ 8-10 ವಿದೇಶೀ ವಿದ್ಯಾರ್ಥಿಗಳಿಗೆ ಹೆಜ್ಜೆ, ತಾಳ, ಅಭಿನಯವೇ ಮೊದಲಾದ ಕಲೆಯನ್ನು ಕಲಿಸಿದ ಗುರು ಸುವರ್ಣರು. ಯಕ್ಷಗಾನದಿಂದ ಮಕ್ಕಳ ಬುದ್ಧಿ ಚುರುಕಾಗುತ್ತದೆ ಎಂಬುದನ್ನು ಮಾಡಿ ತೋರಿಸಿದವರು ಸುವರ್ಣರು. ಇವರು ಲಂಡನ್ನ 32 ಶಾಲೆಗಳಿಗೆ 2004ರಲ್ಲಿ ಸಾಹಿತಿ ವೈದೇಹಿ ಅವರ ಸೂಚನೆ ಮೇರೆಗೆ ಬುದ್ಧಿಮಾಂದ್ಯ ಮಕ್ಕಳಿಗೆ ಯಕ್ಷಗಾನ ಕಲೆಯನ್ನು ಕಲಿಸಿಕೊಟ್ಟರು. ಕುಂದಾಪುರ ತಾಲೂಕಿನ ಅಂಪಾರು ಮೂಡುಬಗೆಯ ವಿಶೇಷ ಮಕ್ಕಳ ಶಾಲೆಗೂ ತೆರಳಿ ಯಕ್ಷಗಾನ ಕಲೆಯನ್ನು ಕಲಿಸಿಕೊಟ್ಟು ಕಲಾಭ್ಯಾಸದಿಂದ ಮಕ್ಕಳ ಬುದ್ಧಿಶಕ್ತಿ ಚುರುಕಾಗುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ಹಿಂದೆ ಎಂಜಿಎಂ ಕಾಲೇಜಿನ ಅಧೀನದಲ್ಲಿದ್ದ ಯಕ್ಷಗಾನ ಕೇಂದ್ರ ಈಗ 55ಕ್ಕೂ ಹೆಚ್ಚು ದೇಶಗಳ ಇಂಗ್ಲಿಷ್ ಮಾತನಾಡುವ ವಿದ್ಯಾರ್ಥಿಗಳನ್ನು ಹೊಂದಿರುವ ಮಣಿಪಾಲ ಮಾಹೆ ವಿ.ವಿ. ಅಧೀ ನದಲ್ಲಿದೆ, ಒಂದೂವರೆ ಕ್ಲಾಸ್ ಓದಿದ ಸುವರ್ಣರು ಇದಕ್ಕೆ ಪ್ರಾಂಶುಪಾಲರು. ಬಿಎ ತರಗತಿಯ ಕನ್ನಡ ಪಠ್ಯಕ್ಕೆ ಸುವರ್ಣರ ಜೀವನಕಥೆಯನ್ನು ಮಂಗಳೂರು ವಿ.ವಿ. ಅಳವಡಿಸಿದೆ.
ಮನೆ ಹೆಸರಿನ ಹಿಂದೆ ಕೃತಜ್ಞತೆ: ಕಾರಂತರು ಸುವರ್ಣರ ಮದುವೆ, ಮನೆ ಕಟ್ಟುವುದರಿಂದ ತೊಡಗಿ ಎಲ್ಲ ಸುಖ-ದುಃಖಗಳಲ್ಲಿ ಭಾಗಿಯಾದರು. ಇಟಲಿ ಪ್ರವಾಸದಲ್ಲಿ ಪಾತ್ರಧಾರಿಗೆ ಅನಾರೋಗ್ಯವಾದಾಗ ಸುವರ್ಣರನ್ನು ಅಭಿಮನ್ಯು ಪಾತ್ರಕ್ಕೆ ಆಯ್ಕೆ ಮಾಡಿದ್ದೂ ಕಾರಂತರು. ಸುವರ್ಣ ಅಡ್ಡ ಹೆಸರನ್ನೂ ಇಡಲು ಕಾರಣ ಕಾರಂತರು, ಕಾರಣ ಜಾತಿಯಲ್ಲ, ಚಿನ್ನ ಎಂಬರ್ಥ. ಮನೆ ಜಾಗ ಖರೀದಿಗೆ 25,000 ರೂ. ಕೊಟ್ಟವರೂ ಅವರೇ. ಇವರ ಸಂಬಂಧ ಹೇಗೆಂದರೆ ಕಾರಂತರ ಮಕ್ಕಳು ಇಂಗ್ಲಿಷ್ನಲ್ಲಿ ಬರೆದ ಪುಸ್ತಕದಲ್ಲಿ ಕಾರಂತರೊಂದಿಗೆ ಸುವರ್ಣರ ಒಡನಾಟಕ್ಕೆ ಮೀಸಲಿಟ್ಟ ಪುಟ ನಾಲ್ಕು. ಗುರುವಿನಿಂದಲೇ ದಕ್ಷಿಣೆ ಪಡೆದ ಕಾರಣ ಮನೆ ಹೆಸರು “ಗುರುದಕ್ಷಿಣೆ’, ಪ್ರೊ| ಹೆರಂಜೆ ಕೃಷ್ಣ ಭಟ್ಟರ ಉಪಕಾರಕ್ಕಾಗಿ ಮನೆ ಆವರಣದ ಹೆಸರು “ಕೃಷ್ಣಾನುಗ್ರಹ’. ಕೇಂದ್ರದ ಟ್ರಸ್ಟಿ, ಮಣಿಪಾಲ ಕೆಎಂಸಿ ನಿವೃತ್ತ ಡೀನ್ ಡಾ| ಪಿಎಲ್ಎನ್ ರಾವ್ ಅವರು ಬಾವಿಯ ಖರ್ಚನ್ನು ಕೊಟ್ಟ ಕಾರಣ ಬಾವಿ ಹೆಸರು “ಲಕ್ಷ್ಮೀನಾರಾಯಣಾನುಗ್ರಹ’. ಮೂಳೆ ತಜ್ಞ ಡಾ|ಭಾಸ್ಕರಾನಂದಕುಮಾರ್ 2 ಲ.ರೂ., ಅಮೆರಿಕದ ರಾಜೇಂದ್ರ ಕೆದಿಲಾಯ 3 ಲ.ರೂ. ಸಾಲ ಕೊಟ್ಟ ಕಾರಣ ಕೋಣೆಗಳ ಹೆಸರು “ಭಾಸ್ಕರಾನುಗ್ರಹ’, “ರಾಜೇಂದ್ರ ಕೆದಿಲಾಯನುಗ್ರಹ’.
ಪ್ರಶಸ್ತಿ ಧನ ಸಂಕಷ್ಟದಲ್ಲಿರುವವರಿಗೆ: ಸುವರ್ಣರು 2010ರಲ್ಲಿ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಜತೆ ಬಂದ 1 ಲ.ರೂ. ಹಣವನ್ನು ಠೇವಣಿಯಾಗಿರಿಸಿ ಬಡ್ಡಿಯನ್ನು ಕೇಂದ್ರಕ್ಕೆ, ವಿದ್ಯಾರ್ಥಿಗಳಿಗೆ ಉಪ ಯೋಗಿಸಿದರು, 20 ಗ್ರಾಂ ಚಿನ್ನವನ್ನು ಮಾರಿ 20,000 ರೂ. ಮೊತ್ತವನ್ನು ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ಗೆ, 15,000 ರೂ. ಮೊತ್ತವನ್ನು ಬಾಲ್ಯದಲ್ಲಿ ಊಟಕ್ಕಿಲ್ಲದಾಗ ಸಹಾಯ ಮಾಡಿದ ಮಹಿಳೆಗೆ (ಬೆಂಗಳೂರಿನಲ್ಲಿ ವೃದ್ಧೆಯಾಗಿದ್ದರು) ಕೊಟ್ಟರು. 60 ವರ್ಷ ತುಂಬಿದಾಗ ಅಭಿಮಾನಿಗಳು ಕೊಟ್ಟ 20 ಗ್ರಾಂ ಚಿನ್ನವನ್ನು ಕೊರೊನಾ ಕಾಲ ಘಟ್ಟದಲ್ಲಿ ವಿವಿಧ ಕಲಾವಿದರಿಗೆ ಹಂಚಿ ಕೈತೊಳೆದು ಕೊಂಡವರು. ಯಾವುದೇ ರೀತಿಯ ಗೌರವ ಸಂಭಾವನೆ ಬಂದರೂ ಅದರ ವಿನಿಯೋಗ ಇದೇ ರೀತಿಯಾಗಿರುತ್ತದೆ..