ಆನ್ಲೈನ್ ಮದುವೆಗೆ ಅಸ್ತು ಎಂದ ಹೈ ಕೋರ್ಟ್!!
ಕೇರಳ :ಮದುವೆ ಎಂದರೆ ನವ-ದಂಪತಿಗಳಿಗೆ ಹೊಸ ಹೆಜ್ಜೆ. ಬದುಕಿನುದ್ದಕ್ಕೂ ಮೆಲುಕುಹಾಕುವಂತಹ ಕ್ಷಣ.ನೂರೆಂಟು ವಿಭಿನ್ನ ಪ್ಲಾನ್ ಗಳೊಂದಿಗೆ ಅದ್ದೂರಿಯಾಗಿ ಮದುವೆ ನಡೆಸುತ್ತಾರೆ.ಮೊದಲೆಲ್ಲ ಮದುವೆ ಅಂದ್ರೆ ಮನೆಯಲ್ಲಿ ಸಂಭ್ರಮ, ದಿನಗಟ್ಟಲೇ ಕೆಲಸ. ಅದು ಒಂದಲ್ಲ ಎರಡಲ್ಲ ಐದಾರು ದಿನ ಮದುವೆ ನಡೆಯೋದು.
ಆದರೆ, ಈಗ ತಾನು, ತನ್ನ ಕೆಲಸ ಎಂದು ಎಲ್ಲರೂ ಫುಲ್ ಬ್ಯುಸಿ. ಕೆಲಸಕ್ಕೋ, ಕಲಿಕೆಗೋ ವಿದೇಶ ಪ್ರಯಾಣ ಮಾಡೋರೆ ಹೆಚ್ಚು. ಇಂತಹ ಕಾಲದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರೂ ಆನ್ಲೈನ್ ಮದುವೆ ಆದ್ರೆ ಎಷ್ಟು ಒಳಿತಲ್ಲ ಎಂದು ಅನಿಸೋದುಂಟು. ಈಗ ಇಂತಹ ಯೋಚನೆಲಿ ಇರೋರಿಗೆ ಸಿಹಿ ಸುದ್ದಿ.ಹೌದು ಆನ್ಲೈನ್ ಮದುವೆಗೆ ಕೇರಳ ಹೈಕೋರ್ಟ್ ಅಸ್ತು ಎಂದಿದೆ. ವಕೀಲ ಜೋಡಿಯೊಂದು ಈ ವಿಚಾರಕ್ಕೆ ಕೋರ್ಟ್ ಮೆಟ್ಟಿಲೇರಿತ್ತು.ಇದೀಗ ಅದಕ್ಕೆ ಒಪ್ಪಿಗೆ ಸಿಕ್ಕಂತಾಗಿದೆ. ಈ ಮೂಲಕ ಹೊಸ ಸಂಪ್ರದಾಯವೊಂದು ಹುಟ್ಟಿಕೊಂಡಿದೆ.
ರಿಂತು ತಾಮಸ್ ಮತ್ತು ಅನಂತ ಹರಿಕೃಷ್ಣ ಎಂಬುವವರು ಮದುವೆಯಾಗಲು ನಿಶ್ಚಯ ಮಾಡಿಕೊಂಡಿದ್ದರು. ಅನಂತ ಹರಿಕೃಷ್ಣ ಇಂಗ್ಲೆಂಡ್ ನಲ್ಲಿ ವಿಧ್ಯಾಭ್ಯಾಸಕ್ಕೆಂದು ಹೋಗಿದ್ದಾರೆ. ಡಿಸೆಂಬರ್ 23 ಕ್ಕೆ ಇವರಿಬ್ಬರ ಮದುವೆ ನಿಶ್ಚಯವಾಗಿತ್ತು. ಅದರಂತೆ ಅನಂತ ಹರಿಕೃಷ್ಣ ನಾಯರ್ ವಿಮಾನದ ಟಿಕೆಟ್ ನ್ನ 22ಕ್ಕೆ ಬುಕ್ ಮಾಡಿದ್ದರು. ಆದ್ರೆ ಈ ಒಮಿಕ್ರಾನ್ ಹೆಚ್ಚಳದಿಂದ ಅವರು ಭಾರತಕ್ಕೆ ಬರಲು ಸಾಧ್ಯವಾಗಿಲ್ಲ.
ನಿಗಧಿಯಂತೆ ಮದುವೆಯಾಗಲು ಸಾಧ್ಯವಾಗಿಲ್ಲ. ಈ ಜೋಡಿ ಆನ್ಲೈನ್ ಮದುವೆ ಬಗ್ಗೆ ಯೋಚಿಸಿ,ಬಳಿಕ ಕೇರಳ ಹೈಕೋರ್ಟ್ ಗೆ ಅರ್ಜಿ ಹಾಕಿದ್ದಾರೆ.ಜೋಡಿಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ಆನ್ಲೈನ್ ಮದುವೆಗೆ ಅಸ್ತು ಎಂದಿದೆ. ‘ವಿಶೇಷ ಮದುವೆ ಕಾಯಿದೆ ಅಡಿಯಲ್ಲಿ ನಾವು ಒಂದು ತಿಂಗಳು ಮೊದಲೇ ಮದುವೆಗಾಗಿ ಮನವಿ ಸಲ್ಲಿಸಿದ್ದೇವೆ. ಕಾಯಿದೆಯ ನಿಯಮಗಳು ಪಾಲನೆಯಾಗಿದ್ದರೂ ನಮಗೀಗ ಕೋವಿಡ್ ಕಾಟ ಎದುರಾಗಿದೆ. ದಯವಿಟ್ಟು ಆನ್‌ಲೈನ್ ಮದುವೆಗೆ ಅನುವು ಮಾಡಿಕೊಡಿ’ ಎಂದು ರಿಂತು ಥಾಮಸ್ ಕೋರಿದರು.
‘ಸೋಂಕು ಇದೆ ಎಂದು ಬದುಕು ನಿಲ್ಲಿಸಬಾರದು. ಆನ್‌ಲೈನ್ ಮೂಲಕವೇ ಮದುವೆಯಾಗಿ. ಇದಕ್ಕೆ ಸೂಕ್ತ ತಾಂತ್ರಿಕ ವ್ಯವಸ್ಥೆಯೊಂದಿಗೆ ಸಹಕರಿಸಿ’ ಎಂದ ಹೈಕೋರ್ಟ್, ಈ ಕುರಿತು ವ್ಯವಸ್ಥೆ ಮಾಡುವಂತೆ ಉಪ ನೋಂದಣಾಧಿಕಾರಿ ಕಚೇರಿಗೆ ಆದೇಶ ನೀಡಿದೆ.’ನಿಮ್ಮ ಮನವಿ ತಿರಸ್ಕರಿಸಲು ಕಾರಣಗಳೇ ಕಾಣುತ್ತಿಲ್ಲ. ಈಗ ಎಲ್ಲವೂ ಆನ್‌ಲೈನ್ ಮಯ ಆಗಿರುವಾಗ ಮದುವೆಗೆ ಇಲ್ಲ ಎನ್ನುವುದು ಸರಿಯಲ್ಲ, ತಥಾಸ್ತು’ ಎಂದು ನ್ಯಾಯಪೀಠ ಹೇಳಿತು. ಶೀಘ್ರದಲ್ಲಿಯೇ ಇವರ ಆನ್‌ಲೈನ್ ವಿವಾಹ ನೆರವೇರಲಿದೆ.ಈ ವಿಚಾರ ಜೋಡಿಗೆ ಸಿಕ್ಕಾಪಟ್ಟೆ ಖುಷಿ ತಂದುಕೊಟ್ಟಿದೆ.