ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಿ ಎಂದು ಹೇಳಲು ವಕ್ಫ್ ಬೋರ್ಡ್ ಗಿಲ್ಲ ಅಧಿಕಾರ !! | ಧ್ವನಿವರ್ಧಕ ತೆರವುಗೊಳಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಪೊಲೀಸ್ ಇಲಾಖೆ
ಬೆಂಗಳೂರು: ಮಸೀದಿಗಳಲ್ಲಿ ಧ್ವನಿವರ್ಧಕ ಬಳಸದಂತೆ ಇದಾಗಲೇ ಹೈಕೋರ್ಟ್ ಕೂಡ ನಿರ್ದೇಶನ ನೀಡಿದ್ದು,ಇದರ ಹೊರತಾಗಿಯೂ ಹಲವೆಡೆಗಳಲ್ಲಿ ಧ್ವನಿವರ್ಧಕ ಬಳಸುತ್ತಿರುವುದು ಬೆಳಕಿಗೆ ಬಂದಿದೆ.ವಕ್ಫ್ ಬೋರ್ಡ್ ಧ್ವನಿವರ್ಧಕ ಬಳಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ತಾವು ಈ ಆದೇಶದ ಪಾಲನೆ ಮಾಡುವುದಿಲ್ಲ ಎಂಬ ಇವರ ವಾದಕ್ಕೆ ಈಗ ಪೊಲೀಸ್ ಠಾಣಾಧಿಕಾರಿಗಳು ಸ್ಪಷ್ಟನೆ ನೀಡುವ ಮೂಲಕ ಸುತ್ತೋಲೆ ಹೊರಡಿಸಿದ್ದಾರೆ.
ನವೆಂಬರ್ 2ರಂದು ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಸುತ್ತೋಲೆ ರವಾನೆಯಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರಿಗೆ, ಜಿಲ್ಲಾ ಪೊಲೀಸ್ ಅಧೀಕ್ಷಕರುಗಳಿಗೆ ಈ ಸುತ್ತೋಲೆಯನ್ನು ಕಳಿಸಲಾಗಿದೆ.ಇಷ್ಟಾದರೂ ಇನ್ನೂ ಹಲವು ಮಸೀದಿಗಳಲ್ಲಿ ಈ ಆದೇಶವನ್ನು ಪಾಲನೆ ಮಾಡುತ್ತಿಲ್ಲ. ತಮಗೆ ವಕ್ಫ್ ಬೋರ್ಡ್ ಧ್ವನಿವರ್ಧಕ ಬಳಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ತಾವು ಈ ಆದೇಶದ ಪಾಲನೆ ಮಾಡುವುದಿಲ್ಲ ಎನ್ನುವುದು ಇವರ ವಾದ. ಅದಕ್ಕೀಗ ಸ್ಪಷ್ಟನೆ ಕೊಟ್ಟು ಇನ್ನೊಂದು ಸುತ್ತೋಲೆ ಹೊರಡಿಸಲಾಗಿದೆ.
ಬೆಂಗಳೂರು ನಗರದ ಸಂಪಿಗೇಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಠಾಣಾಧಿಕಾರಿ ಈ ಸುತ್ತೋಲೆ ಹೊರಡಿಸಿದ್ದು,’ಹೈಕೋರ್ಟ್ ಆದೇಶದ ಹೊರತಾಗಿಯೂ ಕೆಲವು ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಿ ಶಬ್ದಮಾಲಿನ್ಯ ಮಾಡಲಾಗುತ್ತಿದೆ. ವಕ್ಫ್ ಬೋರ್ಡ್‌ನಿಂದ ತಾವು ಅನುಮತಿ ಪಡೆದಿರುವುದಾಗಿ ಹೇಳಲಾಗುತ್ತಿದೆ. ಆದರೆ ಈ ರೀತಿ ಅನುಮತಿ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಇರುವುದಿಲ್ಲ. ಆದ್ದರಿಂದ ಅಧಿಕೃತ ಪ್ರಾಧಿಕಾರದಿಂದ ಮಾನ್ಯತೆಯುಳ್ಳ ಅನುಮತಿ ಪಡೆಯದೇ ಧ್ವನಿವರ್ಧಕ ಅಳವಡಿಸಿ ಪ್ರತಿನಿತ್ಯ ಬಳಸುತ್ತಿದ್ದರೆ ಕೂಡಲೇ ಅದನ್ನು ತೆರವು ಮಾಡಬೇಕು. ಇಲ್ಲದಿದ್ದರೆ ಮಸೀದಿಯ ಆಡಳಿತ ಮಂಡಳಿ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ ಧ್ವನಿವರ್ಧಕ ಬಳಸಲು ಅನುಮತಿ ಪಡೆದುಕೊಂಡಿದ್ದರೆ ಅದು ವಿಶೇಷ ದಿನಗಳಿಗೆ ಮಾತ್ರ ಅನ್ವಯ ಆಗಲಿದ್ದು, ಪ್ರತಿನಿತ್ಯ ಇದನ್ನು ಬಳಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.