ಬೆಂಗಳೂರಿನಲ್ಲಿ ಪಿಎಫ್‌ಐ ರಾಜ್ಯ ಕಾರ್ಯಕಾರಿ ಸಭೆ, ಪ್ರಮುಖ ನಿರ್ಣಯ ಕೈಗೊಂಡ ಸಭೆ

ಬೆಂಗಳೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯು ಡಿ.20-21ರಂದು ಬೆಂಗಳೂರಿನಲ್ಲಿ ನಡೆದ ಪಾಪ್ಯುಲರ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.

  1. ಸಂವಿಧಾನ ವಿರೋಧಿ ಮತಾಂತರ ನಿಷೇಧ ವಿಧೇಯಕ ರದ್ದುಗೊಳಿಸಿ:
    ನಾಗರಿಕರು ತಮ್ಮ ಇಚ್ಛೆಯ ಧರ್ಮವನ್ನು ಆಚರಿಸುವ, ಸ್ವೀಕರಿಸುವ ಧಾರ್ಮಿಕ ಸ್ವಾತಂತ್ರ‍್ಯದ ಹಕ್ಕನ್ನು ಮೊಟಕುಗೊಳಿಸುವ ಮತಾಂತರ ನಿಷೇಧ ವಿಧೇಯಕ ಯಾವುದೇ ಕಾರಣಕ್ಕೂ ಸ್ವೀಕಾರ್ಹವಲ್ಲ. ಬಲವಂತದ ಮತಾಂತರಕ್ಕೆ ಸ್ವತಃ ಸಂವಿಧಾನವೂ ಅವಕಾಶ ಕಲ್ಪಿಸಿಲ್ಲ. ಹೀಗಿರುವಾಗ ರಾಜ್ಯ ಸರಕಾರದ ಮತಾಂತರ ನಿಷೇಧ ವಿಧೇಯಕದ ವಿಚಾರ ಪ್ರಶ್ನಾರ್ಹವಾಗುತ್ತದೆ. ಬಿಜೆಪಿ ಸರಕಾರವು ತನ್ನ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಹಾಕಲು ಮತ್ತು ಕೋಮು ಧ್ರುವೀಕರಣಕ್ಕಾಗಿ ತರಾತುರಿಯಲ್ಲಿ ಈ ವಿಧೇಯಕವನ್ನು ಮಂಡಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ದಲಿತರಿಗೆ ತಮ್ಮ ಆಯ್ಕೆ ಧರ್ಮವನ್ನು ಸ್ವೀಕರಿಸುವುದರಿಂದ ತಡೆಯುವ ಮತ್ತು ಅವರನ್ನು ಮೇಲ್ವರ್ಗದ ಹಿಡಿತದಲ್ಲಿಟ್ಟುಕೊಂಡು ಶೋಷಿಸುವ ಪ್ರಯತ್ನವೂ ಕಾನೂನಿನಲ್ಲಿ ಎದ್ದು ಕಾಣುತ್ತಿದೆ. ಜೊತೆಗೆ ಮತಾಂತರದ ಅಪರಾಧಕ್ಕೆ ವಿಧಿಸುವ ಶಿಕ್ಷೆಯ ಪ್ರಮಾಣವೂ ಆತಂಕಕಾರಿಯಾಗಿದೆ. ಈಗಾಗಲೇ ಬಲವಂತದ ಮತಾಂತರದ ಹೆಸರಿನಲ್ಲಿ ಸಂಘಪರಿವಾರದ ಶಕ್ತಿಗಳು ಅಲ್ಪಸಂಖ್ಯಾತ ವರ್ಗಗಳ ಮೇಲೆ ನಿರಂತರ ದಾಳಿ ನಡೆಸುತ್ತಿವೆ. ಒಂದು ವೇಳೆ ಈ ಕಾನೂನು ಜಾರಿಗೆ ಬಂದರೆ ಈ ದಾಳಿಗಳಿಗೂ ಕಾನೂನಿನ ಮಾನ್ಯತೆ ದೊರಕಬಹುದು. ಅಲ್ಪಸಂಖ್ಯಾತ ವರ್ಗಗಳನ್ನು ಗುರಿಯಾಗಿಟ್ಟುಕೊಂಡಿರುವ ಹಾಗೂ ಸಂವಿಧಾನ ವಿರೋಧಿಯಾದ ಈ ವಿಧೇಯಕವನ್ನು ಸರಕಾರ ಕೂಡಲೇ ಹಿಂಪಡೆಯಬೇಕು ಮತ್ತು ನಾಗರಿಕ ಸಮುದಾಯವೂ ಈ ವಿಧೇಯಕದ ವಿರುದ್ಧ ಒಂದಾಗಿ ಧ್ವನಿ ಎತ್ತಬೇಕೆಂದು ಸಭೆ ಹೇಳಿದೆ.
  2. ಉಪ್ಪಿನಂಗಡಿ ಪೊಲೀಸ್ ದೌರ್ಜನ್ಯವನ್ನು ನ್ಯಾಯಾಂಗ ತನಿಖೆಗೊಳಪಡಿಸಿ:
    ದ.ಕ.ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಪ್ರತಿಭಟನಕಾರರ ಮೇಲೆ ಪೊಲೀಸರು ನಡೆಸಿದ ಕ್ರೂರ ಲಾಠಿಚಾರ್ಜ್ ಕಳವಳಕಾರಿಯಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಪ್ರತೀಕಾರಾತ್ಮಕ ರೀತಿಯಲ್ಲಿ ತಲೆಗೆ ಲಾಠಿ ಬೀಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಲ್ಲಿ 40ರಷ್ಟು ಮಂದಿ ಗಾಯಗೊಂಡಿದ್ದು, ಪೊಲೀಸರು ಇದೀಗ ತಮ್ಮ ಪ್ರಮಾದವನ್ನು ಮುಚ್ಚಿ ಹಾಕಲು ಪ್ರತಿಭಟನಕಾರರು ತಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂಬ ಕಟ್ಟುಕತೆಯನ್ನು ಕಟ್ಟುತ್ತಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಲು ಮತ್ತು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಶಿಕ್ಷೆಗೊಳಪಡಿಸಲು ಈ ಘಟನೆಯನ್ನು ನ್ಯಾಯಾಂಗ ತನಿಖೆಗೊಳಪಡಿಸಬೇಕೆಂದು ಸಭೆ ಆಗ್ರಹಿಸುತ್ತದೆ. ಅದೇ ರೀತಿ ದ.ಕ.ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಸಂಘಪರಿವಾರದ ಮನೋಸ್ಥಿತಿ ಹೊಂದಿರುವ ಪೊಲೀಸರಿದ್ದಾರೆ ಎಂಬ ವಿಚಾರ ಕುಟುಕು ಕಾರ್ಯಾಚರಣೆಯಲ್ಲಿ ಈ ಹಿಂದೆಯೇ ಬಹಿರಂಗವಾಗಿದೆ. ಇದೇ ಕಾರಣದಿಂದ ದ.ಕ.ಜಿಲ್ಲೆಯಲ್ಲಿ ಪೊಲೀಸರ ಕೋಮು ಪೂರ್ವಾಗ್ರಹಪೀಡಿತ ಮತ್ತು ತಾರತಮ್ಯದ ಕಾರ್ಯಾಚರಣೆಗಳು ನಿರಂತರವಾಗಿದೆ. ಜಿಲ್ಲೆಯಲ್ಲಿ ಕೋಮುವಾದಿ ಮನೋಸ್ಥಿತಿಯ ಪೊಲೀಸರನ್ನು ಹೊರಗಟ್ಟಿ ಜಾತ್ಯತೀತ ಮನೋಸ್ಥಿತಿಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡುವ ಮೂಲಕ ಪೊಲೀಸ್ ಇಲಾಖೆಯನ್ನು ಪುನಶ್ಚೇತನಗೊಳಿಸಬೇಕಾಗಿದೆ ಎಂದು ಸಭೆ ಅಭಿಪ್ರಾಯಪಟ್ಟಿದೆ.
  3. ಕನ್ನಡ ವಿರೋಧಿ ಎಂ.ಇ.ಎಸ್ ಪುಂಡಾಟಿಕೆಯನ್ನು ಸರಕಾರ ತಡೆಯಲಿ:
    ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾನಿ ಮಾಡಿ ಕನ್ನಡಿಗರ ಭಾವನೆಗೆ ಧಕ್ಕೆ ತಂದಿರುವ ಎಂ.ಇ.ಎಸ್. ಕಾರ್ಯಕರ್ತರ ದುಷ್ಕೃತ್ಯ ಖಂಡನಾರ್ಹ. ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿಯ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಸ್ಥಾಪಿತ ಹಿತಾಸಕ್ತಿಗಳು ತಮ್ಮ ರಾಜಕೀಯ ಸ್ವಾರ್ಥ ಸಾಧನೆಗಾಗಿ, ಕರ್ನಾಟಕದ ಏಳಿಗೆಗಾಗಿ ದುಡಿದ ಜನಪರ ರಾಜರುಗಳ ಇತಿಹಾಸವನ್ನು ತಿರುಚಿ ಪ್ರಸ್ತುತಪಡಿಸುತ್ತಿವೆ. ಈ ಮೂಲಕ ಜನರನ್ನು ಕೋಮು ಆಧಾರಿತವಾಗಿ ವಿಭಜಿಸಿ ಕನ್ನಡ ನಾಡಿನ ಅಸ್ಮಿತೆಗಳನ್ನು ಒಂದೊಂದಾಗಿ ನಾಶಪಡಿಸುವ ಷಡ್ಯಂತ್ರಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಅಶಾಂತಿ ಹರಡುವ ಎಂ.ಇ.ಎಸ್. ಕಿಡಿಗೇಡಿಗಳ ಪುಂಟಾಟಿಕೆಗೆ ಸರಕಾರ ಕಡಿವಾಣ ಹಾಕಬೇಕು. ಅದೇ ರೀತಿ ಕನ್ನಡದ ಸಂಸ್ಕೃತಿಯ ಮೇಲೆ ನಡೆಯುತ್ತಿರುವ ವ್ಯವಸ್ಥಿತ ದಾಳಿಗಳನ್ನು ಜಾತಿ, ಮತ ಭೇದವಿಲ್ಲದೇ ಎಲ್ಲಾ ಕನ್ನಡಿಗರೂ ಐಕ್ಯರಾಗಿ ಎದುರಿಸಬೇಕೆಂದು ಸಭೆ ಕರೆ ನೀಡುತ್ತದೆ.
  4. ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳನ್ನು ನಿಲ್ಲಿಸಿ:
    ರಾಜ್ಯದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತ ಸಮುದಾಯಗಳ ಮೇಲಿನ ದಾಳಿಗಳು ನಿರಂತರವಾಗಿವೆ. ಬೊಮ್ಮಾಯಿ ಸರಕಾರ ರಚನೆಯಾದ ನಂತರ ಈ ದಾಳಿಗಳು ಮತ್ತಷ್ಟು ಉಗ್ರ ರೂಪ ತಾಳಿವೆ. ಸಂಘಪರಿವಾರದ ದುಷ್ಕರ್ಮಿಗಳು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್ ಗಿರಿ ನಡೆಸುತ್ತಿರುವ ಘಟನೆಗಳು ವ್ಯಾಪಕವಾಗಿವೆ. ಮಸ್ಜಿದ್ ದ್ವಂಸಗೊಳಿಸುವ ಬೆದರಿಕೆ, ಮುಸ್ಲಿಮ್ ವಿರೋಧಿ ದ್ವೇಷದ ಹೇಳಿಕೆಗಳ ಮೂಲಕ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಕೋಮು ದ್ವೇಷ ತುಂಬಿ ಮುಸ್ಲಿಮ್ ವಿರೋಧಿ ಭಾವನೆಗಳನ್ನು ಬಿತ್ತಲಾಗುತ್ತಿದೆ. ಕ್ರೈಸ್ತ ಧರ್ಮೀಯರ ಪ್ರಾರ್ಥನಾ ಕೇಂದ್ರಗಳು, ಧರ್ಮ ಗುರುಗಳು ಮತ್ತು ಭಕ್ತರ ಮೇಲಿನ ದಾಳಿಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿವೆ. ರಾಜ್ಯದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ತಡೆಯಲು ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ಅವರಿಗೆ ರಕ್ಷಣೆಯನ್ನು ಖಾತರಿಪಡಿಸಬೇಕೆಂದು ಸಭೆ ಸರಕಾರವನ್ನು ಒತ್ತಾಯಿಸುತ್ತದೆ.

Leave A Reply

Your email address will not be published.