ಹನುಮನ ಮಂದಿರ ಕೆಡವಿ ಮಸೀದಿ ಕಟ್ಟಿದರೇ??| ಶ್ರೀರಂಗಪಟ್ಟಣದ ಟಿಪ್ಪು ಮಸೀದಿ ಕುರಿತು ಬುಗಿಲೆದ್ದಿದೆ ವ್ಯಾಪಕ ಚರ್ಚೆ
ಈ ಮಸೀದಿ ನಿರ್ಮಾಣದ ಕುರಿತು ಊಹಾ ಪೋಹಗಳು ಹುಟ್ಟಿಕೊಂಡಿವೆ. ಕೆಲವರು ಅಲ್ಲಿ ಹನುಮಂತನ ಗುಡಿಯ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂಬ ವಾದ ಮುಂದಿಡುತ್ತಿದ್ದಾರೆ. ಇನ್ನು ಕೆಲವರು ಅಂತಹ ಯಾವುದೇ ಕುರುಹುಗಳು ಇಲ್ಲ. ಎಂದು ಹೇಳುತ್ತಿದ್ದಾರೆ. ನಾಲೈದು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಎರಡೂ ಗುಂಪಿನವರು ಆಕ್ಷೇಪಾರ್ಹ ಮಾಹಿತಿ ಹಂಚಿ ಕೊಳ್ಳುತ್ತಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.
ಇತಿಹಾಸ: ದೊಡ್ಡ ಮಸೀದಿ, ಟಿಪ್ಪು ಮಸೀದಿ, ಮಸ್ಟಿದ್ ಎ-ಅಲಾ, ಜಾಮಿಯಾ ಮಸೀದಿ- ಹೀಗೆ ವಿಭಿನ್ನ ಹೆಸರುಗಳಿಂದ ಕರೆಸಿಕೊಳ್ಳುವ ಈ ಮಸೀದಿ 1787ರಲ್ಲಿ ನಿರ್ಮಾಣವಾಗಿದೆ. 1782ರಲ್ಲಿ ಆರಂಭವಾದ ಮಸೀದಿ ನಿರ್ಮಾಣ ಕಾರ್ಯ 1787ರಲ್ಲಿ ಪೂರ್ಣಗೊಂಡಿದೆ. ಫಕೀರನೊಬ್ಬನ ಸಲಹೆಯಂತೆ ಟಿಪ್ಪು ಸುಲ್ತಾನ್ (1782 1799) ಈ ಮಸೀದಿಯನ್ನು ನಿರ್ಮಿಸಿದ್ದು, ಪ್ರತಿ ಶುಕ್ರವಾರ ಟಿಪ್ಪು ಸುಲ್ತಾನ್ ಈ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಎಂದು ಇತಿಹಾಸಕಾರ ಎಲ್.ಎನ್.ಸ್ವಾಮಿ ತಮ್ಮ ‘ಹಿಸ್ಟರಿ ಆಫ್ ಶ್ರೀರಂಗಪಟ್ಟಣ’ ಕೃತಿಯಲ್ಲಿ ತಿಳಿಸಿದ್ದಾರೆ.
ಮಸೀದಿ ಕೆಳ ಭಾಗದಲ್ಲಿ ನಾಲ್ಕಾರು ಕೊಠಡಿಗಳಿದ್ದು, ಮೇಲಂತಸ್ತಿನಲ್ಲಿ 100ಕ್ಕೂ ಹೆಚ್ಚು ಜನರು ಕೂರ ಬಹುದಾದ ಸಭಾಂಗ ಣವಿದೆ. ಈ ಸಭಾಂಗಣದ ಕಲ್ಲಿನ ಗೋಡೆ ಗಳ ಮೇಲೆ ಕುರಾನ್ ಗ್ರಂಥದ ಸಾಲುಗಳನ್ನು ಕೆತ್ತಲಾ ಗಿದೆ. ಅರೇಬಿಕ್ ಶೈಲಿಯ ಚಿತ್ರಗಳು ಗಮನ ಸೆಳೆಯುತ್ತವೆ. ಮಸ್ಟಿದ್-ಎ-ಅಲಾದ ಜೋಡಿ ಮಿನಾರುಗಳು ಇದರ ಪ್ರಮುಖ ಆಕರ್ಷಣೆ. ಮೇಲಂತಸ್ತಿನಿಂದ ಶಿಖರದ ವರೆಗೆ ಸುಮಾರು 200 ಮೆಟ್ಟಿಲುಗಳಿವೆ. ತುತ್ತ ತುದಿಯಲ್ಲಿ ಲೋಹದ ಕಳಸ ಕೂರಿಸಲಾಗಿದ್ದು, ಒಂದೊಂದು ಕಳಶದಲ್ಲಿ 2 ಖಂಡುಗ ರಾಗಿ ತುಂಬುವಷ್ಟು ಅವು ಬೃಹತ್ತಾಗಿವೆ.
ತಳ ಮಟ್ಟದಿಂದ ಸುಮಾರು 150 ಅಡಿಗಳಷ್ಟು ಎತ್ತರ ಇರುವ ಈ ಶಿಖರಗಳ ತುದಿಯಿಂದ ಸುತ್ತಲೂ ನೋಡಿದರೆ ಮೈಸೂರು ನಗರ ಸೇರಿದಂತೆ ವಿವಿಧ ಪಟ್ಟಣಗಳು, ನೂರಾರು ಗ್ರಾಮಗಳು, ಕೆಆರ್ಎಸ್ ಜಲಾಶಯ, ನದಿ, ಬೆಟ್ಟ, ಗುಡ್ಡಗಳು ಗೋಚರಿಸುತ್ತವೆ. ಶತ್ರುಗಳ ಚಲನವಲನ ವೀಕ್ಷಿಸಲು ಅನುಕೂಲ ಆಗುವಂತೆ ತಜ್ಞರ ಸಲಹೆಯಂತೆ ಟಿಪ್ಪು ಈ ಮಿನಾರುಗಳನ್ನು ನಿರ್ಮಿಸಿದ್ದಾನೆ. ಕಲ್ಲುಗಳು, ಸುಟ್ಟ ಇಟ್ಟಿಗೆ, ಮರ ಮತ್ತು ಚುರಕಿ ಗಾರೆಯಿಂದ ಈ ಸ್ಮಾರಕವನ್ನು ನಿರ್ಮಿಸಿದ್ದು, ರಾಷ್ಟ್ರೀಯ ಸ್ಮಾರಕಗಳ ಪಟ್ಟಿಗೆ ಸೆರಿದೆ. ಸದ್ಯ ಇದು ‘ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ’ ಇಲಾಖೆ (ಎಎಸ್ಐ)ದ ಸುಪರ್ದಿಯಲ್ಲಿದೆ.
‘ಟಿಪ್ಪು ಸುಲ್ತಾನ್ ಮಸೀದಿ ನಿರ್ಮಿಸುವುದಕ್ಕೂ ಮುನ್ನ ಆ ಸ್ಥಳದಲ್ಲಿ ಹನುಮಂತನ ದೇಗುಲ ಇತ್ತು ಎಂಬ ಅಂಶವನ್ನು ಟಿಪ್ಪು ಆಸ್ಥಾನದ ಪರ್ಶಿಯನ್ ಬರಹಗಾರರು ಉಲ್ಲೇಖಿಸಿದ್ದಾರೆ’ ಎಂದು ಸಾಹಿತಿ ಪ್ರೊ.ಎಂ.ಕರಿಮುದ್ದೀನ್ ಹೇಳುತ್ತಾರೆ.
‘ದಿವಾನ್ ಪೂರ್ಣಯ್ಯ ಅವರ ನೇತೃತ್ವದ ತಜ್ಞರ ಸಮಿತಿ ನೀಡಿದ ಸಲಹೆಯಂತೆ, ಕೋಟೆಯೊಳಗೆ ಇದ್ದುಕೊಂಡೇ ಹೊರಗಿನಿಂದ ಬರುವ ಶತ್ರುಗಳ ಚಲನ ವಲನ ವೀಕ್ಷಿಸಲು ಎತ್ತರದ ಮಿನಾರು ಇರುವ ಮಸೀದಿ ನಿರ್ಮಿಸಲಾಗಿದೆ. ಟೆಲಿಸ್ಕೋಪ್ ಸಹಾಯದಿಂದ 8 ಮೈಲಿ ದೂರದಲ್ಲಿ ನಡೆಯುವ ಚಟುವಟಿಕೆಗಳನ್ನು ಮಿನಾರುಗಳ ಮೇಲೆ ನಿಂತು ವೀಕ್ಷಿಸಲಾಗುತ್ತಿತ್ತು. ಮಸೀದಿ ನಿರ್ಮಾಣಕ್ಕೂ ಮುನ್ನ ಟಿಪ್ಪು ಆಶ್ರಯದಲ್ಲಿದ್ದ ಹಿಂದೂ ಪಂಡಿತರ ಸಲಹೆಯಂತೆ ಹನುಮಂತನ ಮೂರ್ತಿ ಸ್ಥಳಾಂತರಿಸಲಾಗಿದೆ’ ಎಂದು ಪ್ರೊ.ಕರಿಮುದ್ದೀನ್ ತಿಳಿಸಿದ್ದಾರೆ.