ಕನಚೂರ್ ಮೋನುವಿನ ಮೆಡಿಕಲ್ ಪರವಾನಗಿ ಪ್ರಭಾವದಿಂದ ಪಡೆದುಕೊಂಡ ಮಂಗಳೂರಿನ ಪ್ರಭಾವಿ ಯಾರು!?? ದಕ್ಷಿಣ ಕನ್ನಡ ಬಿಜೆಪಿ ಹಾಗೂ ಪೋಸ್ಟ್ ಕಾರ್ಡ್ ಮಹೇಶ್ ವಿಕ್ರಂ ಹೆಗ್ಡೆ ನಡುವೆ ಸಾಮಾಜಿಕ ಜಾಲತಾಣದಲ್ಲಿ ಟಾಕ್ ವಾರ್!!
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ನಡುವಿನ ಮರೆಯಲ್ಲಿನ ಗುದ್ದಾಟ ಕೊಂಚ ತಾರಕಕ್ಕೇರಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊನ್ನೆಯ ದಿನ ಬಸ್ ನಲ್ಲಿದ್ದ ಭಿನ್ನ ಕೋಮಿನ ಜೋಡಿಯ ವಿಚಾರದಲ್ಲಿ ಫೋಟೋ ಸಹಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಜೈಲುಸೇರಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯಾವುದೇ ಪ್ರತಿಕ್ರಿಯೆಯಾಗಲಿ, ಒಲವು ತೋರಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಸಹಿತ ಸಂಘಟನೆಗಳ ಕಾರ್ಯಕರ್ತರು ಕಿಡಿಕಾರಿದ್ದರು.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿಯ ಸುದರ್ಶನ್ ಮೂಡಬಿದಿರೆ ” ಯಾವುದೋ ಕೈಗಳು ರಾಜ್ಯಾಧ್ಯಕ್ಷರು ದುರ್ಬಲರು, ಆ ಹುದ್ದೆ ಕಾರ್ಯಕತರು ಕೊಟ್ಟ ಭಿಕ್ಷೆ ಎಂದೆಲ್ಲಾ ಬರೆಯಲಾಗಿದೆ. ಯಾರ ಹೆಸರನ್ನೂ ಎತ್ತದೆ, ಪರೋಕ್ಷವಾಗಿ ಪೋಸ್ಟ್ ಕಾರ್ಡ್ ನ ಮಹೇಶ್ ವಿಕ್ರಂ ವಿರುದ್ಧ ಕಿಡಿಕಾರಿದ ಸುದರ್ಶನ್, ಹಿಂದೂ ಸಂಘಟನೆಯ ಹಾಗೂ ಬಿಜೆಪಿ ಕಾರ್ಯಕರ್ತರ ಸಹಿತ ನಾಯಕರ ನಡುವೆ ಬಿರುಕು ಮೂಡಲು ಸಾಮಾಜಿಕ ಜಾಲತಾಣದಲ್ಲಿ ಅತೃಪ್ತ ಆತ್ಮಗಳು ಮಾಡುವ ಹುನ್ನಾರ ಎಂದು ಹೇಳಿದ್ದಾರೆ. ಅದಲ್ಲದೇ ಕಟೀಲ್ ಗೆ ಪಕ್ಷವೇ ಜವಾಬ್ದಾರಿ ಹೊರಿಸಿದೆ ಹೊರತು ಯಾರೋ ಕೊಟ್ಟ ಭಿಕ್ಷೆ ಅಲ್ಲವೆಂದು ಸಮಾಜಾಯಿಷಿ ನೀಡಿದ್ದಾರೆ.
ಇದಕ್ಕೆ ಜಾಲತಾಣದಲ್ಲೇ ಉತ್ತರಿಸಿದ ಮಹೇಶ್ ವಿಕ್ರಂ ಹೆಗ್ಡೆ ಹಲವು ಪ್ರಶ್ನೆಗಳನ್ನು ಮುಂಡಿಟ್ಟಿದ್ದಾರೆ.
1)ಕಾರ್ಕಳ ತಾಲೂಕಿನಲ್ಲಿರುವ ಕ್ರಷರ್ ಬ್ಯುಸಿನೆಸ್ ಬಗ್ಗೆ ಅನೇಕರಿಗೆ ಗೊತ್ತಿರಬಹುದು ಮತ್ತು ಆ ಕ್ರಷರ್ ಬ್ಯುಸಿನೆಸ್ ಕಾಂಗ್ರೆಸ್‌ನ ಕೆಲವರಿಗೆ ಸೇರಿದ್ದು ಎಂಬುದು ಕೂಡ ಗೊತ್ತಿರಬಹುದು. ಆದರೆ ಆ ಬ್ಯುಸಿನೆಸ್‌ನಲ್ಲಿ ಪಾಲುದಾರನಾಗಿ ಯಾರ ಕಣ್ಣಿಗೂ ಕಾಣದಂತೆ ಇರುವ ವ್ಯಕ್ತಿ ಯಾರೆಂಬುದು ಗೊತ್ತಿದೆಯೇ? ಇದಕ್ಕೆ ನಿಮ್ಮಲ್ಲಿ ಉತ್ತರ ಇದೆಯೇ? ಅಂತಾ ಪ್ರಶ್ನಿಸಿದ್ದಾರೆ.
2)ವೇಣೂರಿನಲ್ಲಿ ನಡೆಯುತ್ತಿರುವ ಮರಳುಗಾರಿಕೆಯಲ್ಲಿ ಪಾಲುದಾರಿಕೆ ಯಾರದ್ದು ಮತ್ತು ಯಾರೊಂದಿಗೆ? ಅಂತಾ ಸ್ಪಷ್ಟಪಡಿಸಿ ಎಂದು ಮತ್ತೊಂದು ಪ್ರಶ್ನೆ ಕೇಳಿದ್ದಾರೆ.
3)ಕಣಚ್ಚೂರು ಮೋನುವಿನ ಮೆಡಿಕಲ್ ಪರವಾನಗಿಗಾಗಿ ದೆಹಲಿಗೆ ಹೋಗಿ, ರಾಜಕೀಯ ಪ್ರಭಾವದಿಂದ ಪಡೆದುಕೊಂಡ ಮಂಗಳೂರಿನ ಪ್ರಭಾವಿ ರಾಜಕಾರಣಿ ಯಾರು? ಎಂದು ಬಿಜೆಪಿ ನಾಯಕರನ್ನು ಮಹೇಶ್ ಪ್ರಶ್ನಿಸಿದ್ದಾರೆ.
4)ಯುಟಿ ಖಾದರ್ ಅವರ ತಮ್ಮ ನಡೆಸುತ್ತಿರುವ ವೈದ್ಯಕೀಯ ನರ್ಸಿಂಗ್ ಕಾಲೇಜಿನ ಪಾಲುದಾರರಾಗಿ ಇರುವ ನಾಯಕ ಯಾರು? ಅಂತಾ ಮಹೇಶ್ ವಿಕ್ರಂ ಹೆಗ್ಡೆ ಇನ್ನೊಂದು ಪ್ರಶ್ನೆ ಕೇಳಿದ್ದಾರೆ.ಅಲ್ಲದೇ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಉತ್ತರ ಕೊಡುವುದಾಗಿ ಮಹೇಶ್ ವಿಕ್ರಂ ಹೆಗ್ಡೆ ಹೇಳಿದ್ದಾರೆ.
ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರ ಮತ್ತು ನಳಿನ್ ಬೆಂಬಲಿಗರ ಪರ-ವಿರೋಧದ ಚರ್ಚೆಯ ಜೊತೆಗೆ ಮಾತಿನ ಯುದ್ಧವೇ ಆರಂಭವಾಗಿದೆ. ಈ ಟಾಕ್ ವಾರ್ ಯಾವ ಹಂತ ತಲುಪುತ್ತದೆ ಎಂಬುವುದನ್ನು ಕಾದುನೋಡಬೇಕಾಗಿದೆ.