ಬೆಳ್ತಂಗಡಿ: ತಾಲೂಕು ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ | ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಶಾಸಕ ವಸಂತ ಬಂಗೇರ!!
ಬೆಳ್ತಂಗಡಿ ತಾಲೂಕು ರಾಜಕೀಯದಲ್ಲಿ ಹೊಸ ಬೆಳವಣಿಗೆಯೊಂದು ನಡೆದಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಗೌರವಯುತವಾಗಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸುತ್ತೇನೆ ಎಂಬುದಾಗಿ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ವಸಂತ ಬಂಗೇರ, ಚುನಾವಣೆಗೆ ಖರ್ಚು ಮಾಡುವಷ್ಟು ಹಣ ನನ್ನ ಬಳಿ ಇಲ್ಲದ ಕಾರಣ ನಾನು ಮುಂದಿನ ವಿಧಾನಸಭಾ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಸ್ಪಷ್ಟನೆ ನೀಡಿದ್ದಾರೆ.
9 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮತ್ತು 5 ಬಾರಿ ಬೆಳ್ತಂಗಡಿ ಕ್ಷೇತ್ರವನ್ನು ಪ್ರತಿನಿಧಿಸಿರುವ ವಸಂತ ಬಂಗೇರರು 2013 ನೇ ಸಾಲಿನ ಚುನಾವಣೆಯಲ್ಲಿ ಎದುರಾಳಿ ಬಿಜೆಪಿಯ ರಂಜನ್ ಜಿ. ಗೌಡ ರನ್ನು 15741 ಮತಗಳ ಅಂತರದಿಂದ ಸೋಲಿಸಿದ್ದರು. ಆದರೆ 2018 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಯುವ ನಾಯಕ ಹರೀಶ್ ಪೂಂಜರೆದುರು ಸುಮಾರು 23 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.
ಹಾಗೆ ನೋಡಿದರೆ ಬಂಗೇರರು ಸ್ಪರ್ಧೆಯಿಂದ ಹಿಂದೆ ಸರಿದರೆ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಸ್ಥಾನಕ್ಕಾಗಿ ಭಾರೀ ಪೈಪೋಟಿ ಇರುವುದಂತೂ ಸತ್ಯ. ಈ ಹಿಂದೆ ವಸಂತ ಬಂಗೇರ ವಿರುದ್ಧ ಸ್ಪರ್ಧಿಸಿ ಸೋತಿದ್ದ ರಂಜನ್ ಜಿ. ಗೌಡ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ನಡುವೆ ಟಿಕೆಟ್ ಗಾಗಿ ಭಾರೀ ಪೈಪೋಟಿ ಇದೆ. ಇನ್ನೊಂದೆಡೆ ಯುವವಕೀಲ ಮತ್ತು ಕಾಂಗ್ರೆಸ್ ನ ಯುವನಾಯಕ ರಕ್ಷಿತ್ ಶಿವರಾಂ ಅವರೂ ಸ್ಪರ್ಧೆಗೆ ಉತ್ಸುಕರಾಗಿದ್ದಾರೆ ಎನ್ನುವ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
2008ರಿಂದಲೂ ಮುಂಬರುವ ಚುನಾವಣೆಯಲ್ಲಿ ಆರೋಗ್ಯ ಸಮಸ್ಯೆಯಿಂದ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೊಂಡು ಬರುತ್ತಿರುವ ವಸಂತ ಬಂಗೇರ, 2018ರಲ್ಲಿಯೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಬಾರಿಯೂ ಅದೇ ರೀತಿ ನಿಲ್ಲುವುದಿಲ್ಲ ಎಂದು ಹೇಳುತ್ತಿದ್ದರೂ ಮತ್ತೆ ನಿಂತರೆ ಅಚ್ಚರಿ ಪಡಬೇಕಿಲ್ಲ ಬಿಡಿ!!