ತಂಗಿಗೆ ತಾಳಿ ಕಟ್ಟಿದ ಅಣ್ಣ! ಮುಖ್ಯಮಂತ್ರಿ ಸಾಮೂಹಿಕ ವಿವಾಹದಲ್ಲಿ ಸಿಕ್ಕಿಬಿದ್ದ ನಕಲಿ ಜೋಡಿ !
ಸಹೋದರನೊಬ್ಬ ತನ್ನ ಸಹೋದರಿಯನ್ನು ಮದುವೆಯಾಗಿರುವ ಅಚ್ಚರಿಯ ಪ್ರಕರಣವೊಂದು ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಅಲ್ಲಿನ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ ಸಂದರ್ಭ ನಡೆದ ಮದುವೆ ಅದಾಗಿದೆ. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಸಾಮೂಹಿಕ ವಿವಾಹದಲ್ಲಿ ಭಾಗಿಯಾದ 51 ಜೋಡಿಗಳು ಪಾಲ್ಗೊಂಡಿದ್ದವು. ಫಿರೋಜಾಬಾದ್‌ನ ತುಂಡ್ಲಾದಲ್ಲಿ, ಬ್ಲಾಕ್ ಅಭಿವೃದ್ಧಿ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪುರಸಭೆ ತುಂಡಲ, ಬ್ಲಾಕ್ ತುಂಡಲ ಮತ್ತು ಬ್ಲಾಕ್ ನರ್ಖಿಯ 51 ಜೋಡಿಗಳಿಗೆ ವಿವಾಹ ಏರ್ಪಡಿಸಿದ್ದರು. ಸಾಮೂಹಿಕ ವಿವಾಹದಲ್ಲಿ ಎಲ್ಲಾ ಜೋಡಿಗಳಿಗೆ ಸರ್ಕಾರದಿಂದ ಗೃಹೋಪಯೋಗಿ ವಸ್ತುಗಳು ಮತ್ತು ಬಟ್ಟೆಗಳನ್ನು ನೀಡಲಾಯಿತು. ಹಾಗಾಗಿ ಇವೆಲ್ಲವನ್ನು ಪಡೆದುಕೊಳ್ಳಬೇಕು ಎಂಬ ಆಸೆಯಿಂದ ಸಹೋದರನೋರ್ವ ತನ್ನ ಸಹೋದರಿಗೆ ತಾಳಿ ಕಟ್ಟುವ ಮೂಲಕ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದನು.
ಅಣ್ಣ-ತಂಗಿ ಸಿಕ್ಕಿಬಿದ್ದದ್ದು ಹೇಗೆ?
ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಡಿಯಲ್ಲಿ ನಡೆದ ಈ ವಿವಾಹ ಸಮಾರಂಭದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದ ಮೂಲಕ ಸುತ್ತಲಿನ ಜನರಿಗೆ ತಲುಪಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ವಿವಾಹ ಸಮಾರಂಭದಲ್ಲಿ ಅಣ್ಣ-ತಂಗಿ ಸೇರಿದಂತೆ ಇನ್ನೂ ಮೂರು ನಕಲಿ ಜೋಡಿಗಳು ಸಿಕ್ಕಿಬಿದ್ದಿದ್ದಾರೆ.
ಸಾಮೂಹಿಕ ವಿವಾಹದಲ್ಲಿ ನಕಲಿ ಜೋಡಿಯಾಗಿ ಭಾಗಿಯಾದ ಸಹೋದರ ನಾಗಲಾ ಪ್ರೇಮ್ ವಿರುದ್ಧ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಅಭಿವೃದ್ಧಿ ಅಧಿಕಾರಿ ಚಂದ್ರಭಾನ್ ಸಿಂಗ್ ಅವರು ದೂರು ದಾಖಲಿಸಿದ್ದಾರೆ.
ಈ ಕುರಿತು ಮಾತನಾಡಿದ ತುಂಡಲದ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ನರೇಶ್‌ಕುಮಾರ್, ಸಾಮೂಹಿಕ ವಿವಾಹದಲ್ಲಿ ಭಾಗಿಯಾಗುವ ಮದುವೆ ಜೋಡಿಗಳ ಪಟ್ಟಿಯನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮರಸೇನ ಕುಶಾಲಪಾಲ್ ಸಿದ್ಧಪಡಿಸಿ ಪರಿಶೀಲನೆ ನಡೆಸಿದ್ದರು. ಗ್ರಾಮ ಪಂಚಾಯಿತಿ ಘಿರೋಲಿ ಕಾರ್ಯದರ್ಶಿ ಅನುರಾಗ್ ಸಿಂಗ್, ಎಡಿಒ ಸಹಕಾರಿ ಸುಧೀರ್ ಕುಮಾರ್ ಎಡಿಒ ಇದರ ಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದರು. ಆದರೀಗ ನಕಲಿ ವಿವಾಹ ಪ್ರಕರಣ ಬೆಳಕಿಗೆ ಬಂದಿದೆ. ಈ ಅಧಿಕಾರಿಗಳ ಉತ್ತರ ತೃಪ್ತಿಕರವಾಗಿಲ್ಲದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನರೇಶ್‌ಕುಮಾರ್ ಹೇಳಿದ್ದಾರೆ.
ನಕಲಿ ಮದುವೆ ಮಾಡಿಕೊಂಡ ಸಹೋದರನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಬಿಡಿಒ ತಿಳಿಸಿದ್ದಾರೆ. ಇದಲ್ಲದೇ ವಂಚನೆ ಮಾಡಿದ ಇತರ ಜೋಡಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಮರುಮದುವೆಯಾದ ಅನರ್ಹ ಮಹಿಳೆಯಿಂದ ಮದುವೆಗೆ ನೀಡಿದ ಮಾಲನ್ನು ವಾಪಸ್ ಪಡೆಯಲಾಗಿದೆ.