ಹಾರಾಡಿಯಿಂದ ಪಾಪೆಮಜಲು ಶಾಲೆಗೆ ವರ್ಗಾವಣೆಗೊಂಡಿದ್ದ ಶಿಕ್ಷಕಿ ನೇಣು ಬಿಗಿದು ಆತ್ಮಹತ್ಯೆ
ಪುತ್ತೂರು: ಸರಕಾರಿ ಪ್ರೌಢಶಾಲೆಯೊಂದರ ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಅ.14ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ವಿಟ್ಲ ಪಡೂರು ಗ್ರಾಮದ ಪಟ್ಟಿ ನಿವಾಸಿ ಗಣಪ ಪೂಜಾರಿ ರವರ ಪುತ್ರಿ ಪುತ್ತೂರು ನಗರದ ಹಾರಾಡಿ ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ವಾರದ ಹಿಂದೆಯಷ್ಟೆ ಪಾಪಮಜಲು ಸರಕಾರಿ ಪ್ರೌಢ ಶಾಲೆಗೆ ವರ್ಗಾವಣೆಗೊಂಡಿದ್ದ ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಸಿಪಿಸಿಆರ್ಐ ಬಳಿಯ ನಿವಾಸಿ ಪ್ರಿಯಾ ಕುಮಾರಿ ( 38 ವ.)ರವರು ಮೃತಪಟ್ಟವರು.
ಪ್ರಿಯಾ ಕುಮಾರಿಯವರು ಸುಮಾರು 12 ವರ್ಷದಿಂದ ಹಾರಾಡಿ ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿಕೊಂಡಿದ್ದು. ಸುಮಾರು ಒಂದು ತಿಂಗಳ ಹಿಂದೆ ಮುಖ್ಯ ಶಿಕ್ಷಕಿಯಾಗಿ ಭಡ್ತಿಗೊಂಡಿದ್ದರು.
ಕೆಲಸದ ಒತ್ತಡದಿಂದ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದರು. ಮನೆಯಲ್ಲಿರುವಾಗ ಆಗಾಗ ನನ್ನ ಹತ್ತಿರ, ನನಗೆ ಕರ್ತವ್ಯದ ಒತ್ತಡ ಜಾಸ್ತಿಯಾಗುತ್ತಿದೆ ಎಂದು ಹೇಳುತ್ತಿದ್ದರು.
ಡಿ.13 ರಂದು ಬೆಳಗ್ಗೆ ಅಳಿಯ ರಮೇಶ ಕರೆ ಮಾಡಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತಿಳಿಸಿದ್ದರು. ನಾನು ಅವರ ಮನೆಗೆ ತೆರಳಿ ನೋಡಿದಾಗ ಮಗಳು ಮನೆಯ ಒಳಗಿರುವ ಕೋಣೆಯೊಂದರ ಕಿಟಕಿಯ ಮೇಲ್ಬಾಗದ ಕಬ್ಬಿಣದ ರಾಡ್ಗೆ ಚೂಡಿದಾರದ ಶಾಲ್ನಿಂದ ನೇಣು ಬಿಗಿದು ಆತ್ಮಹತ್ಯೆ ಗೈದಿರುವುದು ಕಂಡುಬಂತು.
ಕೂಡಲೇ ಆಕೆಯನ್ನು ಕೆಳಗಿಳಿಸಿ ಅಳಿಯನ ಕಾರಿನಲ್ಲಿ ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ಕೂಡಲೇ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಿದೆವು, ಡಿ.14ರಂದು ಸಾಯಂಕಾಲದ ವೇಳೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಆಕೆ ಕೆಲಸದ ಒತ್ತಡದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ತಂದೆ ಗಣಪ ಪೂಜಾರಿಯವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತಿ ನಿವೃತ್ತ ಯೋಧ ರಮೇಶ್ ಬಿ.ಕೆ., ಪುತ್ರಿಯರಾದ ವಂಶಿ, ದೃಷ್ಟಿ, ತಂದೆ ಗಣಪ ಪೂಜಾರಿ, ತಾಯಿ ಜಯಂತಿರವರನ್ನು ಅಗಲಿದ್ದಾರೆ.