ಬರೋಬ್ಬರಿ ಎರಡು ದಶಕಗಳ ನಂತರ ಭಾರತಕ್ಕೆ ವಿಶ್ವಸುಂದರಿ ಪಟ್ಟ !! | ಭುವನ ಸುಂದರಿಯಾಗಿ ಹೊರಹೊಮ್ಮಿದ ಹರ್ನಾಜ್ ಕೌರ್ ಸಂಧು

ಬರೋಬ್ಬರಿ ಎರಡು ದಶಕಗಳ ನಂತರ ಭಾರತ ವಿಶ್ವ ಸುಂದರಿ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿದೆ. ಇಸ್ರೇಲ್‌ನಲ್ಲಿ ನಡೆದ 70ನೇ ವಿಶ್ವ ಭುವನ ಸುಂದರಿ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಕೌರ್ ಸಂಧು ಅವರು ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ.

ಇಸ್ರೇಲ್‌ನ ದಕ್ಷಿಣ ನಗರವಾದ ಇಲಾಟ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನಲ್ಲಿ ಜಯ ಸಾಧಿಸುವ ಮೂಲಕ ಈ ಕಿರೀಟವನ್ನು ಈಕೆ ಮುಡಿಗೇರಿಸಿಕೊಂಡಿದ್ದಾರೆ. ಚಂಡೀಗಢ ಮೂಲದ ಮಾಡೆಲ್ ಆಗಿರುವ ಹರ್ನಾಜ್ ಗೆಲುವಿನೊಂದಿಗೆ ಎರಡು ದಶಕಗಳ ಬಳಿಕ ಭಾರತಕ್ಕೆ ಈ ಕಿರೀಟ ಸಿಕ್ಕಂತಾಗಿದೆ. ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ 80 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಹರ್ನಾಜ್ ವಿಶ್ವ ಸುಂದರಿ ಪಟ್ಟಕ್ಕೇರಿದರು.

https://www.instagram.com/tv/CXaD7nlK8Zx/?utm_source=ig_web_copy_link

2000ನೇ ಸಾಲಿನಲ್ಲಿ ಲಾರಾ ದತ್ತ ಭುವನ ಸುಂದರಿಯಾದ ಬಳಿಕ ಭಾರತದ ಪಾಲಿಗೆ ಈ ಕಿರೀಟ ನನಸಾಗಿಯೇ ಉಳಿದಿತ್ತು. ಲಾರಾ ಅವರಿಗೂ ಮುನ್ನ 1994ರಲ್ಲಿ ಸುಷ್ಮಿತಾ ಸೇನ್ ಅವರು ಭುವನ ಸುಂದರಿಯ ಪಟ್ಟ ಏರಿದ್ದರು.

‘ನೀವು ಹೇಗೆ ವ್ಯವಹರಿಸಬೇಕು ಎಂಬುದನ್ನು ವೀಕ್ಷಿಸುವ ಯುವತಿಯರಿಗೆ ನೀವು ಏನು ಸಲಹೆ ನೀಡುತ್ತೀರಿ. ಅವರು ಇಂದು ಎದುರಿಸುತ್ತಿರುವ ಒತ್ತಡಗಳು ಏನು?’ ಎಂದು ಅಂತಿಮ ಸುತ್ತಿನಲ್ಲಿ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಹರ್ನಾಜ್, ‘ಇಂದಿನ ಯುವಜನರು ಎದುರಿಸುತ್ತಿರುವ ದೊಡ್ಡ ಸವಾಲೆಂದರೆ ಅದು ತಮ್ಮನ್ನು ತಾವು ನಂಬುವುದು. ನಿಮ್ಮನ್ನು ನೀವು ಅನನ್ಯರು ಎಂದು ತಿಳಿದುಕೊಳ್ಳುವುದು ನಿಮ್ಮನ್ನು ಸುಂದರವಾಗಿಸುತ್ತದೆ. ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ನಿಲ್ಲಿಸಿ ಮತ್ತು ಪ್ರಪಂಚದಾದ್ಯಂತ ನಡೆಯುತ್ತಿರುವ ಹೆಚ್ಚು ಮುಖ್ಯವಾದ ವಿಷಯಗಳ ಬಗ್ಗೆ ಮಾತನಾಡಿ’ ಎಂದು ಉತ್ತರಿಸಿದ್ದರು. ಈ ಉತ್ತರ ಅವರನ್ನು ಭುವನ ಸುಂದರಿ ಪಟ್ಟಕ್ಕೇರಿಸಿದೆ.

Leave A Reply

Your email address will not be published.