ಉಪ್ಪಿನಂಗಡಿ : ಸರಣಿ ಅಪಘಾತ ,ಮೂವರಿಗೆ ಗಾಯ | ತಪ್ಪಿದ ಭಾರಿ ದುರಂತ
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ಪಂಜಾಲ ಎಂಬಲ್ಲಿ ಡಿ. 9ರಂದು ಮಧ್ಯಾಹ್ನ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದು ಲಾರಿ ಪಲ್ಟಿಯಾಗಿ ರಸ್ತೆ ಮಧ್ಯೆ ಬಿದ್ದಿದೆ. ಅಪಘಾತಕ್ಕೀಡಾದ ಕಾರಿನ ಹಿಂದೆ ಬರುತ್ತಿದ್ದ ಇನ್ನೊಂದು ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಮಗುಚಿ ಬಿದ್ದು ಸಂಭವಿಸಿದ ಸರಣಿ ಅಪಘಾತದಲ್ಲಿ 3 ಮಂದಿ ಗಾಯಗೊಂಡಿದ್ದಾರೆ.
ಅದೃಷ್ಟವಶಾತ್ ಭಾರೀ ದುರಂತವೊಂದು ತಪ್ಪಿದೆ. ಮಂಗಳೂರು ಕಡೆಯಿಂದ ನೆಲ್ಯಾಡಿ ಕಡೆ ಹೋಗುತ್ತಿದ್ದ ಕಾರಿಗೆ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಸಂತೋಷ್ ಎಂಬವರು ಸಣ್ಣಪುಟ್ಟ ತರಚಿದ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನೆರಡು ಲಾರಿಗಳ ಚಾಲಕರಾದ ಶೀತಲ್ ಮತ್ತು ಹೇಮಂತ್ ಗಾಯಗೊಂಡಿದ್ದು, ಈ ಈರ್ವರನ್ನು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ನೆಲ್ಯಾಡಿಯಲ್ಲಿ ಹೊಟೇಲ್ ಹೊಂದಿರುವ ಮೆಲ್ಕಾರು ನಿವಾಸಿ ಸಂತೋಷ್ ಎಂಬವರು ತನ್ನ ಕಾರಿನಲ್ಲಿ ಮೆಲ್ಕಾರುನಿಂದ ನೆಲ್ಯಾಡಿಗೆ ಹೋಗುತ್ತಿದ್ದು, ವಿರುದ್ಧ ದಿಕ್ಕಿನಿಂದ ಬೆಂಗಳೂರು ಕಡೆಯಿಂದ ಬಂದ ಲಾರಿ ಇವರ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನ ಮುಂಭಾಗ ಜಖಂ ಗೊಂಡಿದೆ. ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಪಲ್ಟಿ ಹೊಡೆದು ರಸ್ತೆಗೆ ಅಡ್ಡವಾಗಿ ಬಿದ್ದಿದೆ.
ಈ ಎರಡು ವಾಹನ ಡಿಕ್ಕಿ ಹೊಡೆಯುತ್ತಿದ್ದಂತೆ ಕಾರಿನ ಹಿಂದಿನಿಂದಲೇ ಇದ್ದ ಇನ್ನೊಂದು ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಮಗುಚಿ ಬಿದ್ದಿದೆ. ಈ ಮೂರು ವಾಹನಗಳು ಅತಿ ವೇಗದಲ್ಲಿ ಇದ್ದು, ಅದೃಷ್ಟವಶಾತ್ ಭಾರೀ ದುರಂತವೊಂದು ತಪ್ಪಿದಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ರಿಕ್ಷಾ ಚಾಲಕ ಫಾರೂಕ್ ಬೆದ್ರೋಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕಾರ ನೀಡಿದರು.