ಮಂಗಳೂರು: ಉದ್ಯೋಗಕ್ಕೆ ಆಯ್ಕೆಯಾಗಿದ್ದೀರಿ ಎಂದು ಸಂದೇಶ ಕಳಿಸಿ 5.31 ಲಕ್ಷ ರೂ. ವಂಚನೆ
ಮಂಗಳೂರು: ಅರೆಕಾಲಿಕ ಉದ್ಯೋಗಕ್ಕೆ ಆಯ್ಕೆ ಯಾಗಿರುವುದಾಗಿ ಅಪರಿಚಿತ ವ್ಯಕ್ತಿಯಿಂದ ಬಂದ ಸಂದೇಶಕ್ಕೆ ಸ್ಪಂದಿಸಿದ ಪರಿಣಾಮ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ 5,31,200 ರೂ. ಕಳೆದುಕೊಂಡು ವಂಚನೆಗೊಳಗಾದ ಬಗ್ಗೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರ ಮೊಬೈಲ್ ನಂಬರ್ಗೆ ನ. 26ರಂದು ಅಪರಿಚಿತ ವ್ಯಕ್ತಿ ಪಾರ್ಟ್ ಟೈಮ್ ಜಾಬ್ಗ ಆಯ್ಕೆಯಾಗಿರುವುದಾಗಿ ಸಂದೇಶ ಕಳುಹಿಸಿ ಅದರಲ್ಲಿ ಒಂದು ಲಿಂಕ್ ಕಳುಹಿಸಿದ್ದ. ಲಿಂಕ್ ಕ್ಲಿಕ್ ಮಾಡಿ ವಾಟ್ಸ್ ಆ್ಯಪ್ನಲ್ಲಿ ಅಪರಿಚಿತ ವ್ಯಕ್ತಿಯ ಜತೆ ಆನ್ಲೈನ್ ಜಾಬ್ ವಿಷಯವಾಗಿ ಚಾಟ್ ಮಾಡಿದ್ದಾರೆ.
ಜಾಬ್ನ ಸಂಪೂರ್ಣ ಮಾಹಿತಿ ತಿಳಿಯಲು ಅಪರಿಚಿತ ಟೆಲಿಗ್ರಾಂ ಲಿಂಕ್ ಕಳುಹಿಸಿದ್ದ. ಅದನ್ನು ಕ್ಲಿಕ್ ಮಾಡಿದಾಗ ವೆಬ್ಸೈಟೊಂದು ತೆರೆದುಕೊಂಡಿದೆ. ಅದರಲ್ಲಿ ದೂರುದಾರರು ಖಾತೆ ತೆರೆದು ಯೂಸರ್ ಐಡಿ ಮತ್ತು ಪಾಸ್ವರ್ಡ್ ಕ್ರಿಯೇಟ್ ಮಾಡಿದ್ದಾರೆ.
ಆನ್ಲೈನ್ನಲ್ಲಿ ವಸ್ತು ಆರ್ಡರ್ ಮಾಡಿ ಕಮಿಷನ್ ಪಡೆಯಬಹುದು ಎಂದು ಆರೋಪಿ ತಿಳಿಸಿದ್ದಾನೆ. ಅಪರಿಚಿತ ವ್ಯಕ್ತಿ ಕಳುಹಿಸಿದ್ದ ಕ್ಯೂ ಆರ್ ಕೋಡ್ ಹಾಗೂ ಬ್ಯಾಂಕ್ ಖಾತೆಗಳ ಮೂಲಕ ಹಂತ ಹಂತವಾಗಿ 5.31 ಲಕ್ಷ ರೂ. ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ. ಈ ಬಗ್ಗೆ ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.