ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಇ.ಸಿ.ಜಿ ಮೆಷಿನ್ ಹಸ್ತಾಂತರ- ಪತ್ರಕರ್ತರ ಹೃದಯ ತಪಾಸಣಾ ಶಿಬಿರ
ಸುಳ್ಯ: ಎಷ್ಟೇ ಕೆಲಸದ ಒತ್ತಡ ಇದ್ದರೂ ಟೆನ್ಸನ್ ಮಾಡಬೇಡಿ. ಮಾನಸಿಕ ಒತ್ತಡವನ್ನೂ ಟೆನ್ಸನನ್ನೂ ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಬಿ. ಹೇಳಿದ್ದಾರೆ.
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮಂಗಳೂರು ಪ್ರೆಸ್ ಕ್ಲಬ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗು ಪತ್ರಿಕಾಭವನ ಟ್ರಸ್ಟ್ ವತಿಯಿಂದ ನೀಡಿದ ಇ.ಸಿ.ಜಿ. ಮೆಷಿನ್ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆರೋಗ್ಯವನ್ನು ಕಾಪಾಡುವುದು ಅದರಲ್ಲಿಯೂ ಹೃದಯದ ಆರೋಗ್ಯ ಸಂರಕ್ಷಣೆ ಅತೀ ಅಗತ್ಯ. ತಪಾಸಣೆ ನಡೆಸುವ ಮೂಲಕ ಹೃದಯದ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಸಹಾಯಕ ಎಂದು ಅವರು ಹೇಳಿದರು.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮತನಾಡಿ ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಆದುದರಿಂದ ಆರೋಗ್ಯ ಕಾಪಾಡಲು, ಹೃದಯದ ಆರೋಗ್ಯವನ್ನು ಕಾಪಾಡುವುದು ಅತೀ ಮುಖ್ಯ. ಜಿಲ್ಲೆಯ ಪತ್ರಕರ್ತರ ಆರೋಗ್ಯ ರಕ್ಷಣೆಯ ದೃಷ್ಠಿಯಿಂದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಹೃದಯ ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರ ಸಹಕಾರದಲ್ಲಿ ಈ ಬಾರಿ ಸುಳ್ಯ ಹಾಗು ಬಂಟ್ವಾಳ ತಾಲೂಕಿನ ಪತ್ರಕರ್ತರ ಸಂಘಗಳಿಗೆ ಇಸಿಜಿ ಮೆಷಿನ್ ನೀಡಿದ್ದು ಹೃದಯ ತಪಾಸಣಾ ಶಿಬಿರವನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇತರ ತಾಲೂಕು ಪತ್ರಕರ್ತರ ಸಂಘಕ್ಕೂ ಇಸಿಜಿ ಮೆಷಿನ್ ನೀಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಇಸಿಜಿ ಮೆಷಿನ್ ನ್ನು ಶ್ರೀನಿವಾಸ ನಾಯಕ್ ಇಂದಾಜೆ ತಾಲೂಕು ಸಂಘದ ಅಧ್ಯಕ್ಷ ಪದ್ಮನಾಭ ಮುಂಡೋಕಜೆ, ಗೌರವಾಧ್ಯಕ್ಷ ಕೃಷ್ಣ ಬೆಟ್ಟ, ಪ್ರಧಾನ ಕಾರ್ಯದರ್ಶಿ ಗಣೇಶ್ ಮಾವಂಜಿಯವರಿಗೆ ಹಸ್ತಾಂತರ ಮಾಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ, ಸಾರ್ವಜನಿಕ ಆಸ್ಪತ್ರೆಯ ನರ್ಸಿಂಗ್ ಆಫೀಸರ್ ರಮ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪದ್ಮನಾಭ ಮುಂಡೋಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಗಣೇಶ್ ಮಾವಂಜಿ ಸ್ವಾಗತಿಸಿ, ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಕ್ಕೆಟ್ಟಿ ವಂದಿಸಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಗಂಗಾಧರ ಕಲ್ಲಪಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮ ಬಳಿಕ ಪತ್ರಕರ್ತರ ಹೃದಯ ತಪಾಸಣೆ ನಡೆಯಿತು.