Zoom ಮೀಟಿಂಗ್ ನಲ್ಲಿ ಶಾಕಿಂಗ್ ನ್ಯೂಸ್ ಕೊಟ್ಟ ಭಾರತೀಯ ಮೂಲದ ಸಿಇಒ |ಕೇವಲ 30 ನಿಮಿಷದ ಮೀಟಿಂಗ್ ನಲ್ಲಿ 900 ಮಂದಿಯನ್ನು ಕೆಲಸದಿಂದ ವಜಾಗೊಳಿಸಿ ಆದೇಶ
ಕೊರೋನಾ ಲಾಕ್ ಡೌನ್ ಜಾರಿಗೆ ಬಂದ ಮೇಲೆ ಹಲವು ಕಂಪೆನಿಗಳ ಮೀಟಿಂಗ್ ಗಳು ಆನ್ ಲೈನ್ ನಲ್ಲಿ ನಡೆಯುತ್ತಿದ್ದವು. ಈಗಲೂ ಕೂಡ ಹಲವು ಕಂಪನಿಗಳಲ್ಲಿ ಇದೇ ರೀತಿ ವರ್ಕ್ ಫ್ರಂ ಹೋಮ್ ನಡುವೆ ಮೀಟಿಂಗ್ ಗಳು ನಡೆಯುತ್ತವೆ. ಹೀಗಿರುವಾಗ ಇಲ್ಲಿ ನಡೆಯುತ್ತಿದ್ದ ಮೀಟಿಂಗ್ ನಲ್ಲಿ ಉದ್ಯೋಗಿಗಳಿಗೆ ದೊಡ್ಡ ಶಾಕಿಂಗ್ ನ್ಯೂಸೊಂದು ಕಾದಿತ್ತು. 30 ನಿಮಿಷದ ಮೀಟಿಂಗ್ನಲ್ಲಿ 900 ಮಂದಿಯನ್ನು ಕೆಲಸ ತೊರೆಯುವಂತೆ ಭಾರತೀಯ ಮೂಲದ ಸಿಇಒ ಸೂಚಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ನ್ಯೂಯಾರ್ಕ್ ಮೂಲದ ಅಡಮಾನ ಸಾಲ ನೀಡುವ ಬೆಟರ್ ಡಾಟ್ ಕಾಂ ಎನ್ನುವ ಸಂಸ್ಥೆಯಲ್ಲಿ ಈ ಘಟನೆ ನಡೆದಿದ್ದು, ಮೀಟಿಂಗ್ ನಲ್ಲಿ ಭಾಗಿಯಾಗಿದ್ದ ಅಷ್ಟೂ ಮಂದಿಯನ್ನು ಕೆಲ ನಿಮಿಷದಲ್ಲಿ ಕೆಲಸ ತೊರೆಯಿರಿ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.
ಭಾರತೀಯ ಮೂಲದ ಸಿಇಒ ವಿಶಾಲ್ ಗರ್ಗ್ ಮೀಟಿಂಗ್ ಸಂದರ್ಭ ತನ್ನ ಉದ್ಯೋಗಿಗಳಲ್ಲಿ, “ನಿಮ್ಮ ಬಳಿಗೆ ನಾನು ಉತ್ತಮ ಸುದ್ದಿಯೊಂದಿಗೆ ಬಂದಿಲ್ಲ. ಇದು ನೀವು ಕೇಳಲು ಬಯಸುವ ಸುದ್ದಿಯೂ ಅಲ್ಲ. ಆದರೆ, ಅಂತಿಮವಾಗಿ, ಇದು ನನ್ನ ತೀರ್ಮಾನವಾಗಿತ್ತು. ಅದನ್ನು ನೀವು ನನ್ನಿಂದ ಕೇಳಬೇಕು ಎಂದು ನಾನು ಬಯಸುತ್ತೇನೆ. ಇದನ್ನು ನಾನು ಎರಡನೇ ಬಾರಿಗೆ ಮಾಡುತ್ತಿದ್ದೇನೆ. ಇದನ್ನು ನಾನು ಮಾಡಲು ಬಯಸುವುದಿಲ್ಲ, ಕೊನೆಯ ಬಾರಿ ನಾನು ಇದನ್ನು ಮಾಡಿದಾಗ ಅಳುತ್ತಿದ್ದೆ. ಆದರೆ, ಈ ಬಾರಿ ನಾನು ಬಲಶಾಲಿಯಾಗಿದ್ದೇನೆ ಎಂದು ಭಾವಿಸುತ್ತೇನೆ. ಆದರೆ, ನಾವು ಕಂಪೆನಿಯ ಸುಮಾರು ಪ್ರತಿಶತವನ್ನು ವಜಾಗೊಳಿಸುತ್ತಿದ್ದೇವೆ” ಎಂದಿದ್ದಾರೆ.
“ವಜಾಗೊಳಿಸಿದ ಉದ್ಯೋಗಿಗಳು ನಾಲ್ಕು ವಾರಗಳ ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಾವಕಾಶ, ಒಂದು ತಿಂಗಳ ಸಂಪೂರ್ಣ ಪ್ರಯೋಜನೆಗಳು ಹಾಗೂ ಎರಡು ತಿಂಗಳ ಕವರ್-ಅಪ್ ಸೌಲಭ್ಯಗಳಿಗೆ ಆರ್ಹರಾಗಿರುತ್ತಾರೆ. ಇದಕ್ಕಾಗಿ, ಕಂಪೆನಿಯು ಪ್ರೀಮಿಯಂ ಪಾವತಿಸುತ್ತದೆ” ಎಂದು ಹೇಳಿದ್ದಾರೆ. ಝೂಮ್ ಕರೆ ಸಭೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಆಗಿದ್ದು, ಈ ವೀಡಿಯೋವನ್ನು ವಜಾಗೊಂಡ ಉದ್ಯೋಗಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈಗ ಅಮೇರಿಕಾದಲ್ಲಿ ರಜೆದಿನಗಳು ಆರಂಭವಾಗುತ್ತಿದ್ದು, ಸುದೀರ್ಘ ರಜೆಗೂ ಮೊದಲು ಕಂಪೆನಿಯಿಂದ ಏನಾದರೂ ಸೌಲಭ್ಯ ಸಿಗಬಹುದು ನಿರೀಕ್ಷೆಯಲ್ಲಿ ಮೀಟಿಂಗ್ನಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗಳಿಗೆ ತಕ್ಷಣವೇ ಪಿಂಕ್ ಸ್ಲಿಪ್ ಸಿಕ್ಕಿದೆ. ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಬೆಟರ್ ಡಾಟ್ ಕಾಂ ಸಂಸ್ಥೆ ತನ್ನ ಸಂಖ್ಯೆಯನ್ನು ಶೇ.9ರಷ್ಟು ತಗ್ಗಿಸಿಕೊಂಡಿದ್ದು, ಎಲ್ಲರನ್ನು ಮೀಟಿಂಗ್ನಲ್ಲೇ ವಜಾಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ವಿಶಾಲ್ ಗರ್ಗ್ ಅವರು ನ್ಯೂಯಾರ್ಕ್ ವಿವಿಯಲ್ಲಿ ಬಿಸಿನೆಸ್ ಸ್ಟಡಿ ವಿಷಯ ಅಧ್ಯಯನ ಮಾಡಿದ್ದು, 2016ರಲ್ಲಿ ಸಂಸ್ಥೆ ಸ್ಥಾಪಿಸಿದರು. ಗೋಲ್ಡ್ ಮನ್ ಸಾಚ್ ಕಿನರ್ ಪರ್ಕಿನ್ಸ್ ಆರ್ಥಿಕ ಬೆಂಬಲ ಪಡೆದುಕೊಂಡಿತ್ತು. ತಮ್ಮ ಸಂಸ್ಥೆ 2020ರಲ್ಲಿ ಶೇ 400ರಷ್ಟು ಪ್ರಗತಿ ಕಂಡಿದ್ದು, 2021ರಲ್ಲಿ 3 ಪಟ್ಟು ಅಧಿಕ ಲಾಭ ಗಳಿಸಲಿದೆ ಎಂದು ತಿಳಿಸಿದ್ದರು.