ರಾಜ್ಯದಲ್ಲಿ ರಂಗೇರಿದ ವಿಧಾನ ಪರಿಷತ್ ಚುನಾವಣಾ ಕಣ | ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಅಭ್ಯರ್ಥಿಗಳಿಂದ ನಡೆಯುತ್ತಿದೆ ಮತ ಓಲೈಕೆಯ ಕಸರತ್ತು
ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣಾ ಕಣ ರಂಗೇರಿದೆ. ಶತಾಯಗತಾಯ ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಅಭ್ಯರ್ಥಿಗಳು ಮತದಾರರ ಓಲೈಕೆಗಾಗಿ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಜಿದ್ದಾಜಿದ್ದಿಗೆ ಬಿದ್ದಂತೆ ಮತಕ್ಕೂ ಬೆಲೆ ನಿಗದಿ ಮಾಡುತ್ತಿದ್ದು, ಮತಗಳ ಬೆಲೆ ಗಗನಮುಖಿಯಾಗಿದೆ.
ಒಂದೊಂದು ಕ್ಷೇತ್ರದ ಬೇಡಿಕೆ ಒಂದೊಂದು ರೀತಿಯಲ್ಲಿದೆ. ಪ್ರತಿ ಮತಕ್ಕೆ 10 ಸಾವಿರ ರೂ.ನಿಂದ ಹಿಡಿದು 1 ಲಕ್ಷ ರೂ.ಗಳ ತನಕ ಆಮಿಷ ಒಡ್ಡಿರುವ ಪ್ರಕರಣಗಳು ಚುನಾವಣಾ ಅಖಾಡದಲ್ಲಿ ಕೇಳಿ ಬರುತ್ತಿವೆ.
ಚುನಾವಣೆ ಖರ್ಚಿಗೆಂದು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಔದಾರ್ಯದಿಂದ ನೀಡುತ್ತಿದ್ದ ಹಣ
ದುಬಾರಿಯಾಗುತ್ತಾ ಬಂದು, ಈಗ ಡಿಮಾಂಡ್ ರೂಪ ಪಡೆದುಕೊಂಡಿದೆ. ಇಂತಿಷ್ಟು ಕೊಡಲೇಬೇಕು ಎಂದು ಪಟ್ಟು ಹಿಡಿದು ಕೇಳುವ ಮತದಾರರು ಒಂದು ಕಡೆಯಾದರೆ, ನಮಗೆ ಮತ ಹಾಕಿ ಎಂದು ಆಮಿಷ ಒಡ್ಡಿ ಮತ ಸೆಳೆಯುವ ಅಭ್ಯರ್ಥಿಗಳು ಮತ್ತೊಂದೆಡೆ.
ಒಟ್ಟಿನಲ್ಲಿ ಇಡೀ ಚುನಾವಣೆ ಹಣದ ಥೈಲಿಯಲ್ಲಿ ಮಿಂದೇಳುತ್ತಿದೆ. ಒಂದು ಮತಕ್ಕೆ ಅತಿ ಹೆಚ್ಚು ಬೆಲೆ ಕಟ್ಟಿರುವುದು ಬೆಂಗಳೂರಿನಲ್ಲಿ ಎನ್ನುವುದು ವಿಶೇಷ. ಒಬ್ಬೊಬ್ಬರಿಗೆ ಒಂದೊಂದು ಲಕ್ಷ ನೀಡಿ ಮತ ಸೆಳೆಯುತ್ತಿದ್ದಾರೆ ಎನ್ನುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.