ಕೇರಳ -ದ.ಕ : ಗಡಿ ತಪಾಸಣೆ ಬಿಗಿ ,ಮೂರು ಪಾಳಿಯಲ್ಲಿ ತಪಾಸಣೆ
ಮಂಗಳೂರು : ವಿದೇಶದಲ್ಲಿ ರೂಪಾಂತರಿ ಕೊರೊನಾ ವೈರಸ್ “ಒಮಿಕ್ರಾನ್’ ಪತ್ತೆ ಮತ್ತು ಕೊರೊನಾ 3ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಕೇರಳ ಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ವೇಳೆ ತಪಾಸಣೆ ಬಿಗಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದಿಂದ ಬರುವ ವಿದ್ಯಾರ್ಥಿಗಳಲ್ಲಿ ಪಾಸಿಟಿವಿಟಿ ದರ ಶೇ. 8ರಷ್ಟು ವರದಿಯಾಗುತ್ತಿದೆ. ಅದಕ್ಕಾಗಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಿಎಂ ಶನಿವಾರ ಸೂಚನೆ ನೀಡಿದ್ದರು. ಅದರಂತೆ ಎಲ್ಲ ಗಡಿಗಳಲ್ಲಿಯೂ ಸ್ಥಳೀಯ ಪೊಲೀಸ್ ಠಾಣಾ ಸಿಬಂದಿ ಹಾಗೂ ಇತರ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದರು.
ಲಾಕ್‌ಡೌನ್ ಕುರಿತು ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ,ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ- ಡಾ.ಸುಧಾಕರ್
ನೆಗೆಟಿವ್ ವರದಿ ಕಡ್ಡಾಯ
ದ.ಕ. ಜಿಲ್ಲೆಯಿಂದ ಕೇರಳ ಭಾಗಕ್ಕೆ ಬಸ್ ಸಂಚಾರ ಸದ್ಯಕ್ಕೆ ಮುಂದುವರಿಯಲಿದೆ. ಆದರೆ ಎರಡೂ ಕಡೆಗಳಲ್ಲಿಯೂ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ.
ಕೇರಳದಲ್ಲಿ ಪಾಸಿಟಿವಿಟಿ ದರ ಹೆಚ್ಚಿದ್ದರೂ ಕಾಸರಗೋಡಿನಲ್ಲಿ ಕಡಿಮೆ ಇದೆ. ಕಾಸರಗೋಡಿನ ಸುಮಾರು ಶೇ. 40ರಷ್ಟು ಮಂದಿ ದ.ಕ. ಜಿಲ್ಲೆ ಯನ್ನು ವಿವಿಧ ಕಾರಣಗಳಿಂದ ಅವಲಂಬಿಸಿ ದ್ದಾರೆ. ಗಡಿ ಭಾಗಗಳಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಅದಲ್ಲದೆ ಕಳೆದ 15 ದಿನಗಳಿಂದ ಕೇರಳದಿಂದ ಬಂದ ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ಸ್ಕ್ರೀನಿಂಗ್ ಮಾಡಲು ಸೂಚಿಸಲಾಗಿದೆ ಎಂದರು.
ಜಿಲ್ಲಾಡಳಿತಕ್ಕೆ ಪಟ್ಟಿ
ದಕ್ಷಿಣ ಆಫ್ರಿಕಾದಿಂದ ಇಲ್ಲಿಗೆ ಬಂದವರ ಪಟ್ಟಿಯನ್ನು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಿಲ್ಲಾಡಳಿತಕ್ಕೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ಬಂದವರನ್ನು ಮತ್ತೊಮ್ಮೆತಪಾಸಣೆಗೊಳಪಡಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಕಳೆದ 15 ದಿನಗಳಿಂದೀಚೆಗೆ ಬಂದವರ ಪಟ್ಟಿಯನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ.
ಮಂಗಳೂರಿಗೆ ದುಬಾೖಯಿಂದ ಬರುವವರು ಹೆಚ್ಚು. ಹಾಗೆ ಬರುವವರಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದಿದ್ದರೆ ಅವರನ್ನು ತಪಾಸಣೆ ಮಾಡುವ ವ್ಯವಸ್ಥೆಯೂ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಇದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.