ಬೆಳ್ತಂಗಡಿ : ಬೆಳಾಲಿನ ಮುಖ್ಯ ರಸ್ತೆ ಬದಿ ಅಳವಡಿಸಲಾಗಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಮರ ಸಾಗಾಟದ ಲಾರಿ | ಪರಾರಿಯಾದ ಚಾಲಕನನ್ನು ಬೆನ್ನಟ್ಟಿ ದಂಡ ವಸೂಲಿ ಮಾಡಿಸಿದ ಸಾರ್ವಜನಿಕರು
ಬೆಳ್ತಂಗಡಿ : ಬೆಳಾಲು ಹೈಸ್ಕೂಲ್ ಮುಂಭಾಗದ ಮುಖ್ಯ ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಕಂಬಗಳಿಗೆ ಮರ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದು, ಪರಾರಿಯಾಗಲು ಯತ್ನಿಸಿದ ಘಟನೆ ನ.25 ರಂದು ನಡೆದಿದೆ.
ರಾತ್ರಿ ಸುಮಾರು 7.30ರ ಸಮಯದಲ್ಲಿ ಕೇರಳಕ್ಕೆ ಮರ ಸಾಗಾಟ ಮಾಡುತ್ತಿದ್ದ 12 ಚಕ್ರದ ಬೃಹತ್ ಲಾರಿಯೊಂದು ಡಿಕ್ಕಿ ಹೊಡೆದು, ಎರಡು ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ಪ್ರವಹಿಸುತ್ತಿದ್ದ ತಂತಿಗಳು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಆದರೂ ಇದನ್ನು
ಕಡೆಗಣಿಸಿದ ಚಾಲಕ ಲಾರಿಯನ್ನು ನಿಲ್ಲಿಸದೆ ಪರಾರಿಯಾಗಿದ್ದನು.
ಇದನ್ನು ಗಮನಿಸಿದ ಬೆಳಾಲಿನ ಲೈನ್ ಮೆನ್ ಆನಂದರವರು ಬೆಳಾಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕ ಸುಲೈಮಾನ್
ಬೆಳಾಲುರವರಿಗೆ ಈ ಬಗ್ಗೆ ಮಾಹಿತಿ ನೀಡಿ, ಪರಾರಿಯಾದ ಲಾರಿಯನ್ನು ಪತ್ತೆ ಮಾಡಲು ವಿನಂತಿಸಿದ್ದರು. ಕೂಡಲೇ ಸುಲೈಮಾನ್ ಹಾಗೂ
ಆನಂದರವರು ಬೈಕಿನಲ್ಲಿ ಲಾರಿಯನ್ನು ಬೆನ್ನಟ್ಟಿಕೊಂಡು ಹೋಗಿ ನಿನ್ನಿಕಲ್ಲು ಬಳಿ ಒಂದು ಲಾರಿಯನ್ನು ತಡೆದು ನಿಲ್ಲಿಸಿದ್ದರು. ಆದರೆ ಆ ಲಾರಿ ಚಾಲಕ ವಿದ್ಯುತ್ ಕಂಬಕ್ಕೆ ತಾನು ಡಿಕ್ಕಿ ಹೊಡೆದಿಲ್ಲ. ಇನ್ನೊಂದು ಲಾರಿ ಡಿಕ್ಕಿ ಹೊಡೆದಿದೆ ಎಂದು ವಾದಿಸಿದ್ದನು.ಕೂಡಲೇ ಸುಲೈಮಾನ್ ರವರು ಬೆಳ್ತಂಗಡಿ ಸಂಚಾರಿ ಠಾಣಾ ಎಸ್.ಐ. ಓಡಿಯಪ್ಪ ಗೌಡರವರಿಗೆ ಕರೆ ಮಾಡಿ ಪರಾರಿಯಾದ ಲಾರಿಯನ್ನು ಹಿಡಿಯುವಂತೆ ಕೇಳಿಕೊಂಡರು.
ತಕ್ಷಣ ಕಾರ್ಯಪ್ರವೃತ್ತರಾದ ಬೆಳ್ತಂಗಡಿ ಸಂಚಾರಿ
ಪೊಲೀಸರು ಗುರುವಾಯನಕೆರೆಯ ಮನೆಯೊಂದರ ಬಳಿ ಆ ಲಾರಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಠಾಣೆಗೆ
ಲಾರಿಯನ್ನು ಕರೆತರಲಾಗಿ, ವಿಚಾರಣೆ ನಡೆಸಲಾಗಿತ್ತು. ಉಜಿರೆ ಮೆಸ್ಕಾಂ ಅಧಿಕಾರಿಗಳ ಬಳಿ ಲಾರಿಯವರು ಮಾತುಕತೆ ನಡೆಸಿ, ಕಾನೂನು ಪ್ರಕಾರ, ಹೊಸ ವಿದ್ಯುತ್ ಕಂಬ ಹಾಕುವ ಪೂರ್ತಿ ಖರ್ಚು ನೀಡಿ ಲಾರಿಯನ್ನು ಠಾಣೆಯಿಂದ ಬಿಡಿಸಿಕೊಳ್ಳುವ ವ್ಯವಸ್ಥೆ
ಮಾಡಿದರು.ಬೆಳಾಲು ವಿಪತ್ತು ನಿರ್ವಹಣಾ ತಂಡದ ಸದಸ್ಯ ಸುಲೈಮಾನ್, ಬೆಳಾಲು ಲೈನ್ ಮ್ಯಾನ್ ಆನಂದ, ಸಂಚಾರಿ ಠಾಣಾ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.