ಹುಟ್ಟಿದ ಮರುಕ್ಷಣವೇ ತಾಯಿಯಿಂದ ದೂರವಾಗಿದ್ದ ಕಂದಮ್ಮ ಒಂದು ವರ್ಷದ ಬಳಿಕ ಮರಳಿ ಹೆತ್ತಬ್ಬೆಯ ಮಡಿಲಿಗೆ!! | ಹೆತ್ತವಳಿಂದ ಮಗುವನ್ನು ದೂರ ಮಾಡಿದ್ದಾದರೂ ಯಾರು??
ಈ ಭೂಮಿಗೆ ಕಾಲಿಟ್ಟ ಮರುಕ್ಷಣವೇ ತನ್ನ ಹೆತ್ತವಳಿಂದ ದೂರಾದ ಮಗುವು ಒಂದು ವರ್ಷದ ಬಳಿಕ ತಾಯಿಯ ಮಡಿಲು ಸೇರಿದೆ. ಏನೂ ಅರಿಯದ ಆ ಪುಟ್ಟ ಕಂದನನ್ನು ತನ್ನ ತಾಯಿಯಿಂದ ದೂರ ಮಾಡಿದ್ದು ಬೇರಾರು ಅಲ್ಲ, ಆ ಕಂದನ ಸ್ವಂತ ಅಜ್ಜಿಯೇ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಕೇರಳದಲ್ಲಿ. ಹೆತ್ತಾಕೆಯ ಒಂದು ವರ್ಷದ ಸತತ ಪ್ರಯತ್ನದಿಂದ ತನ್ನ ತಾಯಿ ಮಡಿಲು ಸೇರಿದ ಆ ಕಂದನ ಕಥೆ ಇಲ್ಲಿದೆ ನೋಡಿ.
ಅದು 2020ರ ಅಕ್ಟೋಬರ್ 19. ಕೇರಳದ ಅವಿವಾಹಿತೆಯಾಗಿದ್ದ ಅನುಪಮಾ ಮುದ್ದು ಗಂಡುಮಗುವಿಗೆ ಜನ್ಮ ನೀಡಿದ್ದರು. ಆಕೆ ಅಜಿತ್ ಎಂಬುವವರನ್ನು ಪ್ರೀತಿಸಿದ್ದ ಫಲವೇ ಈ ಮಗು. ಇಬ್ಬರೂ ಮದುವೆಯಾಗುವ ಯೋಚನೆಯಲ್ಲಿದ್ದರಾದರೂ, ಅದು ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಅನುಪಮಾ ಅವರಿಗೆ ಒಬ್ಬಳು ಅಕ್ಕ ಇದ್ದು, ಆಕೆಗೆ ಮದುವೆಯಾಗದ ಹಿನ್ನೆಲೆಯಲ್ಲಿ ಆಕೆಯ ಮದುವೆಯಾಗುವವರೆಗೂ ತಂಗಿಗೆ ಮದುವೆ ಮಾಡುವುದಿಲ್ಲ ಎನ್ನುವುದು ಪಾಲಕರ ಹಠವಾಗಿತ್ತು.
ಈ ಎಲ್ಲ ಸಮಸ್ಯೆಗಳ ನಡುವೆಯೇ ಅನುಪಮಾ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮಗು ಹುಟ್ಟುತ್ತಲೇ ಆಕೆಯ ಅರಿವಿಗೆ ಬಾರದಂತೆ ಅಪ್ಪ- ಅಮ್ಮ ಮಗುವನ್ನು ದತ್ತು ನೀಡಿಬಿಟ್ಟಿದ್ದರು. ಕೇರಳದ ದತ್ತುಕೇಂದ್ರದ ಮೂಲಕ ಈ ದತ್ತು ಪ್ರಕ್ರಿಯೆ ನಡೆದಿತ್ತು. ಮಗು ಹುಟ್ಟುತ್ತಲೇ ಅದನ್ನು ಯಾರೋ ಅಪಹರಿಸಿಬಿಟ್ಟಿರು ಎಂದು ಅನುಪಮಾ ಅವರಿಗೆ ಅವರ ತಾಯಿ ತಿಳಿಸಿದ್ದರು.
ಈ ಮಗುವನ್ನು ಆಂಧ್ರಪ್ರದೇಶದ ದಂಪತಿ ಪಡೆದುಕೊಂಡಿದ್ದರು. ತಾಯಿಯ ಮಾತಿನ ಮೇಲೆ ಅನುಪಮಾ ಮತ್ತು ಅಜಿತ್ ಅವರಿಗೆ ನಂಬಿಕೆ ಬಂದಿರಲಿಲ್ಲ. ಅವರು ತನಿಖೆ ನಡೆಸಿದಾಗ ಮಗುವನ್ನು ದತ್ತುಕೇಂದ್ರದ ಮೂಲಕ ದತ್ತುಕೊಟ್ಟಿದ್ದು ತಿಳಿದುಬಂತು. ಇದಾಗುವ ಹೊತ್ತಿಗೆ ಕೆಲವು ತಿಂಗಳುಗಳೇ ಕಳೆದಿದ್ದವು. ಸುಮ್ಮನೇ ಕುಳಿತುಕೊಳ್ಳದ ಅನುಪಮಾ ಹಲವು ದಿನಗಳವರೆಗೆ ದತ್ತು ಕೇಂದ್ರದ ಮುಂದೆ ಧರಣಿ ಕುಳಿತುಬಿಟ್ಟರು. ಈ ವಿಷಯ ಮಕ್ಕಳ ಕಲ್ಯಾಣ ಆಯೋಗಕ್ಕೂ ಹೋಯಿತು.
ಅಲ್ಲಿ ವಿಚಾರಣೆ ನಡೆದು ಮಗುವನ್ನು ಮರಳಿ ರಾಜ್ಯಕ್ಕೆ ಕರೆತರಲು ದತ್ತುಕೇಂದ್ರಕ್ಕೆ ಆಯೋಗ ನಿರ್ದೇಶನ ನೀಡಿತು. ನಂತರ ಅಧಿಕಾರಿಗಳು ಆಂಧ್ರಪ್ರದೇಶಕ್ಕೆ ತೆರಳಿ ಮಗುವನ್ನು ವಾಪಸ್ ತಂದಿದ್ದಾರೆ. ನಂತರ ಆ ಮಗು ಇವರದ್ದೇ ಹೌದೋ ಅಲ್ಲವೋ ಎಂಬುದಕ್ಕೆ ಡಿಎನ್ಎ ಪರೀಕ್ಷೆಯನ್ನೂ ನಡೆಸಲಾಯಿಗಿತ್ತು. ಮಗು ಈ ಜೋಡಿಯದ್ದೇ ಎಂದು ತಿಳಿದುಬಂದಿದ್ದರಿಂದ ಕೊನೆಗೂ ಆ ಮಗು ತನ್ನ ಹೆತ್ತಬ್ಬೆಯ ಮಡಿಲು ಸೇರಿತು.
ಅನುಪಮಾ ಅವರು ಧರಣಿ ಕುಳಿತ ಹಿನ್ನೆಲೆಯಲ್ಲಿ ಈ ಸುದ್ದಿ ಕೇರಳಾದ್ಯಂತ ಭಾರಿ ಸಂಚಲವನ್ನೇ ಸೃಷ್ಟಿಸಿತ್ತು. ಇದೀಗ ಈ ಜೋಡಿಗೆ ನ್ಯಾಯ ಸಿಕ್ಕಿದೆ. ಮಗುವನ್ನು ಕೊಡುವ ಮುನ್ನ ಮಗುವಿನ ತಂದೆ ಅಜಿತ್‌ನನ್ನೂ ನ್ಯಾಯಾಧೀಶರು ಕರೆಸಿ ಮಗುವನ್ನು ನೋಡಿಕೊಳ್ಳಲು ಬುದ್ಧಿಮಾತು ಹೇಳಿದ್ದಾರೆ. ಆದರೆ ಇನ್ನೊಂದೆಡೆ ಒಂದು ವರ್ಷದಿಂದ ಮಗುವನ್ನು ಸಾಕಿರುವ ಆಂಧ್ರದ ದಂಪತಿ ಮಾತ್ರ ದುಃಖದಲ್ಲಿ ಮುಳುಗಿದ್ದಾರೆ.