ಏರ್ಟೆಲ್, ವೊಡಾಫೋನ್ ಬಳಿಕ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಜಿಯೋ!! | ಪ್ರೀಪೇಯ್ಡ್ ಸುಂಕದಲ್ಲಿ ಶೇಕಡ 20 ಏರಿಕೆ, ಡಿಸೆಂಬರ್ 1 ರಿಂದ ಹೊಸ ರೀಚಾರ್ಜ್ ದರ ಜಾರಿಗೆ
ಈ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಸದವರೇ ಇಲ್ಲ. ಮೊಬೈಲ್ ಬಳಸಬೇಕೆಂದರೆ ರೀಚಾರ್ಜ್ ಮಾಡಿಸಲೇಬೇಕು. ಆದರೆ ಇದೀಗ ರೀಚಾರ್ಜ್ ಮಾಡಿಸುವುದು ತುಂಬಾನೇ ದುಬಾರಿಯಾಗಿ ಹೋಗಿದೆ. ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪೆನಿಗಳಂತೆ ರಿಲಯನ್ಸ್ ಜಿಯೋ ಕೂಡ ತನ್ನ ಪ್ರೀಪೇಯ್ಡ್ ರೀಚಾರ್ಜ್ ದರಗಳನ್ನು ಏರಿಸುವ ಮೂಲಕ ದೇಶದಾದ್ಯಂತ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.
ದೇಶದ ನಂ.1 ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ, ಇದೇ ಡಿಸೆಂಬರ್ 1, 2021 ರಿಂದ ತನ್ನ ಪ್ರಿಪೇಯ್ಡ್ ಸುಂಕದ ದರಗಳಲ್ಲಿ ಹೆಚ್ಚಳವನ್ನು ಘೋಷಿಸಿದ್ದು, ತನ್ನ ಪ್ರಿಪೇಯ್ಡ್ ಸುಂಕಗಳನ್ನು ಶೇ 20 ರಷ್ಟು ಹೆಚ್ಚಿಸುವುದಾಗಿ ತಿಳಿಸಿದೆ. “ಸುಸ್ಥಿರ ಟೆಲಿಕಾಂ ಉದ್ಯಮವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಗೆ” ಅನುಗುಣವಾಗಿ ತನ್ನ ಬೆಲೆಗಳನ್ನು ಏರಿಸಿರುವುದಾಗಿ ಜಿಯೋ ತಿಳಿಸಿದೆ. ಆದರೆ, ಮೂರು ಟೆಲಿಕಾಂ ಕಂಪೆನಿಗಳ ಏಕಮುಖ ನಿರ್ಧಾರದಿಂದಾಗಿ ದೇಶದ ಜನತೆ ಬೆಸ್ತುಬಿದ್ದಿದೆ.!
ಹೌದು, ದೇಶದ ಪ್ರಮುಖ ಖಾಸಾಗಿ ಟೆಲಿಕಾಂ ಕಂಪೆನಿಗಳಾದ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಎಲ್ಲವೂ ಒಂದು ವಾರದೊಳಗೆ ಪ್ರೀಪೇಯ್ಡ್ ರೀಚಾರ್ಜ್ ಬೆಲೆಗಳ ಹೆಚ್ಚಳವನ್ನು ಘೋಷಿಸಿವೆ. ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪೆನಿಗಳು ಬೆಲೆ ಏರಿಕೆ ಬಗ್ಗೆ ಅಷ್ಟೇನೂ ಚಿಂತಿಸಿದ ಗ್ರಾಹಕರಿಗೆ ಇದು ಬರಸಿಡಿಲಿನಂತೆ ಎದುರಾದ ಸುದ್ದಿಯಾಗಿದ್ದು, ರಿಲಯನ್ಸ್ ಜಿಯೋ ಕೂಡ ತನ್ನ ಪ್ರೀಪೇಯ್ಡ್ ಬೆಲೆಗಳನ್ನು ಹೆಚ್ಚಿಸಿರುವುದನ್ನು ನೋಡಿ ದೇಶದ ಗ್ರಾಹಕರು ಬೆಸ್ತುಬಿದ್ದಿದ್ದಾರೆ. ಜಿಯೋ ಈಗ ತನ್ನ ತನ್ನ ಕೆಲವು ಜನಪ್ರಿಯ ಯೋಜನೆಗಳ ಬೆಲೆಗಳನ್ನು 480 ರೂ.ವರೆಗೆ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ.
ಜಿಯೋ ನ ಜನಪ್ರಿಯ ಬೇಸಿಕ್ 75 ರೂ.ಯೋಜನೆ ಬೆಲೆ ಈಗ 91 ರೂ.ಗಳಾಗಿವೆ. ಈ ಹಿಂದೆ 129 ರೂ. ಇದ್ದ ರೀಚಾರ್ಜ್ ಯೋಜನೆಯನ್ನು ಖರೀದಿಸಲು 155 ರೂ. ಪಾವತಿಸಬೇಕಾಗುತ್ತದೆ. ಇದರಲ್ಲಿ 2GB ಡೇಟಾ, ಅನಿಯಮಿತ ಕರೆಗಳು ಮತ್ತು 300 SMS ಪ್ರತಿ ತಿಂಗಳು ಲಭ್ಯವಿದೆ. ಇದೇ ರೀತಿ, ನೀವು ರೂ.149 ಪ್ಲಾನ್ಗೆ ರೂ.179 ಪಾವತಿಸಬೇಕಾಗಿದ್ದು, ಇದು ದಿನಕ್ಕೆ 1 ಜಿಬಿ ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್ಎಂಎಸ್ಗಳನ್ನು 24 ದಿನಗಳ ಮಾನ್ಯತೆಯೊಂದಿಗೆ ನೀಡುತ್ತಿದೆ. ಇಲ್ಲಿಯವರೆಗೆ 199 ರೂಪಾಯಿಗೆ ಸಿಗುತ್ತಿದ್ದ ರೀಚಾರ್ಜ್ಗೆ ಈಗ ನೀವು 239 ರೂಪಾಯಿ ಪಾವತಿಸಬೇಕಾಗುತ್ತದೆ. ಇದರಲ್ಲಿ ದಿನಕ್ಕೆ 1.5 GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಲಭ್ಯವಿದೆ. 249 ರೂ ರೀಚಾರ್ಜ್ ಈಗ 299 ರೂ. ಗೆ ಲಭ್ಯವಿರುತ್ತವೆ. ಇದರಲ್ಲಿ ದಿನಕ್ಕೆ 2 GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಲಭ್ಯವಿದೆ.
ಇನ್ನು ರೂ 399 ಗೆ 56 ದಿನಗಳ ವ್ಯಾಲಿಡಿಟಿಯ ಜಿಯೋ ಯೋಜನೆಯು ಈಗ 479 ರೂ.ಗೆ ಬೆಲೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ದಿನಕ್ಕೆ 1.5 GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಲಭ್ಯವಿದೆ. 56 ದಿನಗಳ ವ್ಯಾಲಿಡಿಟಿಯ ಯೋಜನೆಯನ್ನು 444 ರೂಪಾಯಿಂದ 533 ರೂ.ಗೆ ಹೆಚ್ಚಿಸಲಾಗಿದೆ. ಇದರಲ್ಲಿ ದಿನಕ್ಕೆ 2 GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಲಭ್ಯವಿದೆ. ವಾರ್ಷಿಕ ಯೋಜನೆಗಳಲ್ಲಿ, 1299 ರೂ.ಗೆ 336 ದಿನಗಳವರೆಗೆ ಸಿಗುತ್ತಿದ್ದ ಈ ಯೋಜನೆಯು ಇದೀಗ 1559 ರೂ. ಬೆಲೆಯನ್ನು ಹೊಂದಿದೆ. ಇದರಲ್ಲಿ ಒಟ್ಟು 24 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು 3600 ಸಂದೇಶಗಳು ಲಭ್ಯವಿರುತ್ತವೆ. 2399 ರೂ.ಗಳ 365 ದಿನಗಳ ಯೋಜನೆಯು ಈಗ 2879 ರೂ.ಬೆಲೆಯನ್ನು ಹೊಂದಿದ್ದು, ಇದರಲ್ಲಿ ದಿನಕ್ಕೆ 2 GB ಡೇಟಾ, ಅನಿಯಮಿತ ಧ್ವನಿ ಮತ್ತು ದಿನಕ್ಕೆ 100 SMS ಲಭ್ಯವಿದೆ.
ದೇಶದ ಬಹುತೇಕ ಬಳಕೆದಾರರ ನೆಚ್ಚಿನ 84 ದಿನಗಳ ವ್ಯಾಲಿಡಿಟಿಯ ರೀಚಾರ್ಜ್ ಯೋಜನೆಗಳ ಬೆಲೆಗಳು ಕೂಡ ಹೆಚ್ಚಳಗೊಂಡಿದ್ದು, ಇದೀಗ ಜಿಯೋವಿನ 329 ರೂ. ಯೋಜನೆಯನ್ನು 395 ರೂಪಾಯಿಗೇರಿಸಲಾಗಿದೆ. ಇದರಲ್ಲಿ ಒಟ್ಟು 6 GB ಡೇಟಾ, ಅನಿಯಮಿತ ಧ್ವನಿ ಮತ್ತು ಒಟ್ಟು 1000 SMS ಲಭ್ಯವಿದೆ. 84 ದಿನಗಳ ಮಾನ್ಯತೆಯೊಂದಿಗೆ 555 ರೂ ಯೋಜನೆಯು ಇದೀಗ 666 ರೂ.ಗಳಾಗಿದೆ. ಇದರಲ್ಲಿ ದಿನಕ್ಕೆ 1.5 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಲಭ್ಯವಿದೆ. 599 ರೂ. ಗಳ 84 ದಿನಗಳ ವ್ಯಾಲಿಡಿಟಿಯ ಯೋಜನೆಯು ಈಗ 719 ರೂ. ಆಗಿದ್ದು, ಇದರಲ್ಲಿ ದಿನಕ್ಕೆ 2 GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMSಗಳು ಲಭ್ಯವಿದೆ.