ಸಂತ್ರಸ್ತೆ ಗುಪ್ತಾಂಗಕ್ಕೆ 2 ಬೆರಳು ಹಾಕಿ ಪರೀಕ್ಷಿಸುವ ಅವೈಜ್ಞಾನಿಕ ಕ್ರಮಕ್ಕೆ ಅಂತ್ಯ ಹಾಡಿ | ಬಾಂಬೆ ಹೈಕೋರ್ಟ್ ತಾಕೀತು !

ಮುಂಬೈ: ಅತ್ಯಾಚಾರ ಸಂತ್ರಸ್ತೆಯ ಗುಪ್ತಾಂಗಕ್ಕೆ ಬೆರಳು ಹಾಕಿ ಪರೀಕ್ಷಿಸುವ ಅವೈಜ್ಞಾನಿಕ ಕ್ರಮಕ್ಕೆ ಅಂತ್ಯ ಹಾಡುವಂತೆ ಬಾಂಬೆ ಹೈಕೋರ್ಟ್ ಹೇಳಿದೆ.

ಸಂತ್ರಸ್ತೆಯ ಕನ್ಯಾಪೊರೆಗೆ ಹಾನಿಯಾಗಿದೆಯೇ ಇಲ್ಲವೇ ಎಂದು ಪತ್ತೆ ಹಚ್ಚಲು ಬೆರಳು ಹಾಕಿ ನಡೆಸಲಾಗುವ ಪರೀಕ್ಷೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈ ವಿಧಾನಕ್ಕೆ ಅಂತ್ಯ ಹಾಡಲು ಮಹಾರಾಷ್ಟ್ರ ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿದೆ ಎಂಬ ಆಶಾಭಾವವನ್ನು ಬಾಂಬೆ ಹೈಕೋರ್ಟ್‌ ವ್ಯಕ್ತಪಡಿಸಿದೆ.

2013ರಲ್ಲಿ ಮುಂಬೈನ ಶಕ್ತಿಮಿಲ್‌ ಆವರಣದಲ್ಲಿ 19 ವರ್ಷದ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿತನಾಗಿರುವ ಮೊಹಮ್ಮದ್‌ ಅಶ್ಫಾಕ್ ದಾವೂದ್‌ ಶೇಖ್‌ ಸಲ್ಲಿಸಿದ್ದ ಮೇಲ್ಮನವಿ ವಜಾ ಆದೇಶದ ಸಂದರ್ಭ ನ್ಯಾಯಾಲಯವು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಲ್ಲಿನ ಜೆ ಜೆ ಆಸ್ಪತ್ರೆಯ ವೈದ್ಯರು ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಗೆ ಸಂಬಂಧಿಸಿದ ಕೆಲವು ಆಘಾತಕಾರಿ ವಿಚಾರಗಳ ಕುರಿತು ಸೆಷನ್ಸ್‌ ನ್ಯಾಯಾಧೀಶರು ಮಾಡಿರುವ ಅವಲೋಕನಗಳನ್ನು ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಜಾಧವ್‌ ಮತ್ತು ಪಿ ಕೆ ಚವ್ಹಾಣ್‌ ನೇತೃತ್ವದ ವಿಭಾಗೀಯ ಪೀಠ ಪರಿಗಣಿಸಿದೆ.

‘ಸುಪ್ರೀಂ ಕೋರ್ಟ್‌ ವಿರೋಧದ ನಡುವೆಯೂ ವೈದ್ಯರು ಸಂತ್ರಸ್ತೆಗೆ ಅವಮಾನಕರವಾದ ಮತ್ತು ಅವೈಜ್ಞಾನಿಕ ವಿಧಾನವಾದ ಗುಪ್ತಾಂಗಕ್ಕೆ ಕೈ ಹಾಕಿ ಕನ್ಯಾಪೊರೆ ಪರೀಕ್ಷಿಸುವ ‘ಗತಕಾಲದ ಎರಡು ಬೆರಳುಗಳ ‘ ( ಟು ಫಿಂಗರ್ ಟೆಸ್ಟ್ ) ಪರೀಕ್ಷಾ ವಿಧಾನವನ್ನು ಅನುಸರಿಸಿದ್ದಾರೆ ಎಂದು ಸೆಷನ್ಸ್‌ ನ್ಯಾಯಾಧೀಶರು ಆದೇಶದಲ್ಲಿ ಹೇಳಿದ್ದಾರೆ.

Leave A Reply

Your email address will not be published.