ಕೊರೋನ ವೈರಸ್ ನ ಹೊಸ ರೂಪಾಂತರಿ ಪತ್ತೆ|ವೇಗವಾಗಿ ಹರಡೋ ಈ ತಳಿಗೆ ‘ಒಮಿಕ್ರೋನ್’ಎಂದು ನಾಮಕರಣ

ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರಿ ಪತ್ತೆಯಾಗಿದ್ದು,ಇದು ಜಗತ್ತಿನಾದ್ಯಂತ ಭಾರಿ ಕಳವಳ ಮೂಡಿಸಿದೆ. ಈ ವೈರಸ್ ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಸಿಂಗಪುರ ಹೇಳಿದೆ.

 

ಈ ತಳಿಯಿಂದ ಎದುರಾಗಬಹುದಾದ ಅಪಾಯದ ಬಗ್ಗೆ ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ ನಿನ್ನೆ ಸಭೆ ನಡೆಸಿದ್ದು, ಸಭೆಯಲ್ಲಿ ಕೊರೋನಾ B.1.1.529 ರೂಪಾಂತರಿಗೆ ‘ಒಮಿಕ್ರೋನ್’ ಎಂದು ನಾಮಕರಣ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ, ರೂಪಾಂತರಿ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನ ಕೈಗೊಂಡಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಮಹತ್ವದ ಆದೇಶ ನೀಡಿದೆ.ವಿಶ್ವದಲ್ಲಿ 87 ‘ಒಮಿಕ್ರೋನ್’ ಪ್ರಭೇದ ರೂಪಾಂತರಿಗಳಿದ್ದು,ದಕ್ಷಿಣ ಆಫ್ರಿಕಾದ ಸಾವಿರಾರು ಜನರಲ್ಲಿ ರೋಗದ ಲಕ್ಷಣ ಕಂಡು ಬಂದಿದೆ.

ದಕ್ಷಿಣ ಆಫ್ರಿಕಾ ಸೇರಿ 7 ರಾಷ್ಟ್ರಗಳಿಗೆ ವಿಮಾನ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೊಸ ತಳಿಯ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಕೆಲವು ವಿದೇಶಗಳಿಂದ ಆಗಮಿಸುವವರಿಗೆ ಟೆಸ್ಟ್ ಸೇರಿ ಹೆಚ್ಚುವರಿ ಕ್ರಮಗಳನ್ನು ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕುರಿತಾಗಿ ಆದೇಶ ಹೊರಡಿಸಿದೆ. ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಹಾಂಕಾಂಗ್ ಮೊದಲಾದ ದೇಶಗಳಿಂದ ಭಾರತಕ್ಕೆ ಬರುವವರಿಗೆ ಕೋವಿಡ್ ಪರೀಕ್ಷೆ ಸೇರಿದಂತೆ ಹೆಚ್ಚುವರಿ ಕ್ರಮ ಅನುಸರಿಸಲು ಸೂಚನೆ ನೀಡಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಈ ತಿಂಗಳ ಆರಂಭದಿಂದ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಏರಿಕೆಗೆ ಓಮಿಕ್ರಾನ್ ತಳಿಯೇ ಕಾರಣವಾಗಿರಬಹುದು. ದಕ್ಷಿಣ ಆಫ್ರಿಕಾದ ನೆರೆಯ ದೇಶಗಳಿಗೂ ಈ ರೂಪಾಂತರ ತಳಿಯು ಹರಡಿರಬಹದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾ ಘಟಕವು ಹೇಳಿದೆ.ಈ ತಳಿಯ ಜಿನೋಮ್ ಸೀಕ್ವೆನ್ಸ್ ಅಧ್ಯಯನವನ್ನು ಸಿಂಗಪುರ ನಡೆಸಿತ್ತು. ಮೂಲ ಕೊರೊನಾವೈರಸ್‌ ಮತ್ತು ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವಿರುವ ಡೆಲ್ಟಾ ರೂಪಾಂತರ ತಳಿಗಿಂತಲೂ ವೇಗವಾಗಿ ಹರಡುವ ಸಾಮರ್ಥ್ಯ ಈ ತಳಿಗೆ ಇದೆ ಎಂಬುದು ಅಧ್ಯಯನದಲ್ಲಿ ಪತ್ತೆಯಾಗಿದೆ.

‘ದಕ್ಷಿಣ ಅಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾವೈರಾಣುವಿನ ಹೊಸ ತಳಿಯ ವಿರುದ್ಧ ಕೋವಿಡ್‌-19 ತಡೆ ಲಸಿಕೆಗಳು ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಇದೆ. ಈ ತಳಿಯ ವೈರಾಣು ಆಫ್ರಿಕಾ ಖಂಡದಿಂದಾಚೆಗೆ ಈಗಾಗಲೇ ಹರಡಿರುವ ಅಪಾಯವಿದೆ. ಇದನ್ನು ನಿಯಂತ್ರಿಸದೇ ಇದ್ದರೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ’ ಎಂದು ಬ್ರಿಟನ್‌ನ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ‘ಈ ತಳಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಈ ತಳಿಯ ವಿರುದ್ಧವೂ ಲಸಿಕೆಗಳು ರಕ್ಷಣೆ ನೀಡುತ್ತವೆಯೇ ಎಂಬುದನ್ನು ತಿಳಿದುಕೊಳ್ಳಲು ಇನ್ನೂ ಒಂದು ವಾರ ಬೇಕಾಗುತ್ತದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Leave A Reply

Your email address will not be published.