ಭಾರತೀಯ ಮಹಿಳೆಯರ ಸರಾಸರಿ ಸಂತಾನ ಪ್ರಮಾಣ ಶೇ. 2 ಕ್ಕೆ ಇಳಿಕೆ | ಗರ್ಭ ನಿರೋಧಕತೆಗೆ ಮೊರೆ ಹೋಗುವವರ ಪ್ರಮಾಣ ಅಧಿಕ ಆಗಿರುವುದೇ ಕಾರಣ !!
ನವದೆಹಲಿ: ಭಾರತದಲ್ಲಿ ಕೆಲವೇ ವರ್ಷಗಳ ಹಿಂದೆ ಶೇ. 2.2 ರಷ್ಟಿದ್ದ ಭಾರತೀಯ ಮಹಿಳೆಯರ ಸರಾಸರಿ ಸಂತಾನ ಪ್ರಮಾಣವು (ಟಿಎಫ್ಆರ್) ಶೇ. 2ಕ್ಕೆ ಇಳಿದಿದೆ.
ಗರ್ಭ ನಿರೋಧಕತೆಗೆ ಮೊರೆ ಹೋಗುವವರ ಪ್ರಮಾಣ ಹೆಚ್ಚಾಗಿರುವುದೇ ಇದಕ್ಕೆ ಕಾರಣವಾಗಿದ್ದು, ಪ್ರಸ್ತುತ (ಸಿಪಿಆರ್) ಶೇ. 54ರಿಂದ ಶೇ. 67ಕ್ಕೆ ಹೆಚ್ಚಿದೆ ಎಂದು ‘ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ-5’ ರ ವರದಿಯಲ್ಲಿ ಹೇಳಲಾಗಿದೆ. ದೇಶದ ಜನಸಂಖ್ಯೆಯ ವಿಚಾರಕ್ಕೆ ಸಂಬಂಧಿಸಿದಂತೆ ಇದು ಪ್ರಮುಖವಾದ ವಿಚಾರ ಆಗಿದ್ದು, ಕೇಂದ್ರ ಆರೋಗ್ಯ ಇಲಾಖೆ ನಡೆಸಿದ್ದ ಈ ಸಮೀಕ್ಷೆಯ ವಿವರಗಳನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.
ಒಬ್ಬ ಮಹಿಳೆಯು ತನ್ನ ಜೀವಿತಾವಧಿಯಲ್ಲಿ ಎಷ್ಟು ಮಕ್ಕಳಿಗೆ ಜನ್ಮ ನೀಡಬಲ್ಲಳು ಎಂಬುದರ ಆಧಾರದಲ್ಲಿ ಸರಾಸರಿ ಲೆಕ್ಕಾಚಾರ ಹಾಕುವುದಕ್ಕೆ ಟಿಎಫ್ಆರ್ ಎಂದು ಕರೆಯುತ್ತಾರೆ. 2015 ಹಾಗೂ 2016ರ ಅವಧಿಯಲ್ಲಿ ನಡೆಸಲಾಗಿದ್ದ ಅಧ್ಯಯನದ ಪ್ರಕಾರ ತಯಾರಿಸಲಾಗಿದ್ದ ಟಿಎಫ್ಆರ್-4ರ ವರದಿಯಲ್ಲಿ ಮಹಿಳೆಯರ ಸಂತಾನೋತ್ಪತ್ತಿ ಪ್ರಮಾಣ ಶೇ. 2.2 ರಷ್ಟಿರುವುದಾಗಿ ಉಲ್ಲೇಖಿಸಲಾಗಿತ್ತು. ಆದರೆ, 2019 ಹಾಗೂ 2021ರ ಅವಧಿಯಲ್ಲಿ ನಡೆಸಲಾಗಿರುವ ಸಮೀಕ್ಷೆಯ ವರದಿಯಲ್ಲಿ (ಟಿಎಫ್ಆರ್-5) ಇದು ಇಳಿಕೆಯಾಗಿರುವುದು ಕಂಡುಬಂದಿದೆ.