ಶೀಘ್ರದಲ್ಲೇ ಬೆಳೆಹಾನಿ ಪರಿಹಾರ ಬಿಡುಗಡೆಗೆ ಆದೇಶ: ಮುಖ್ಯಮಂತ್ರಿ ಬೊಮ್ಮಾಯಿ
ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ರಾಗಿ, ಜೋಳ, ಭತ್ತ, ತರಕಾರಿ, ಶೇಂಗಾ ಮೊದಲಾದ ಹಲವಾರು ಬೆಳೆಗಳು ವ್ಯಾಪಕವಾಗಿ ನಾಶವಾಗಿದ್ದು, ಅವುಗಳಿಗೆ ತಕ್ಷಣ ಪರಿಹಾರ ನೀಡಬೇಕೆಂದು ಪ್ರಥಮ ಬಾರಿಗೆ ಸರ್ವೆ ಆಗಿ ಪರಿಹಾರ ಆ್ಯಪ್ನಲ್ಲಿ ಮಾಹಿತಿ ಭರ್ತಿ ಆದ ಕೂಡಲೆ ರೈತರ ಖಾತೆಗಳಿಗೆ ಪರಿಹಾರ ಜಮೆಯಾಗುವಂತೆ ಆದೇಶ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಈ ಆದೇಶದ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಕಾರ್ಯದರ್ಶಿ, ಕಂದಾಯ ಇಲಾಖೆಯ ಕಾರ್ಯದರ್ಶಿಗೆ ಆದೇಶ ಮಾಡಿ ರೈತರ ಬೆಳೆ ನಷ್ಟದ ಮಾಹಿತಿ ಭರ್ತಿಯಾಗುತ್ತಿದ್ದಂತೆ ಅವರ ಖಾತೆಗಳಿಗೆ ಪರಿಹಾರದ ಮೊತ್ತ ಜಮೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ರೈತರಿಗೆ ಪರಿಹಾರ ನೀಡಲು ಹಣದ ಕೊರತೆ ಎದುರಾದಲ್ಲಿ ಒಂದೆರಡು ದಿನ ಮುಂಚಿತವಾಗಿ ತಿಳಿಸಿದರೆ,ಅಗತ್ಯ ಹಣ ಬಿಡುಗಡೆ ಮಾಡುವುದಾಗಿಯೂ ಹಣಕಾಸು ಇಲಾಖೆ ಕಾರ್ಯದರ್ಶಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಬೆಳೆ ಪರಿಹಾರ ಆದಷ್ಟು ಬೇಗ ಬಿಡುಗಡೆ ಮಾಡಲು ವ್ಯವಸ್ಥೆ ಮಾಡಿದ್ದೇವೆ ಎಂದರು.