ಕೊನೆಗೂ ಬಿತ್ತು ಬ್ರೇಕ್ ಕೊಯಿಲದ ಅಕ್ರಮ ಕೋಳಿ ಅಂಕಕ್ಕೆ
ಕಡಬ: ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ನಿಡೇಲು ಎಂಬಲ್ಲಿ ಗುರುವಾರ ನಡೆಸಲು ಸಿದ್ದತೆ ನಡೆಸಿದ್ದ ಕೊಳಿ ಅಂಕಕ್ಕೆ ಕಡಬ ಪೊಲೀಸರು ಬ್ರೇಕ್ ಹಾಕಿದ್ದಾರೆ.
ನೀಡೇಲು ಎಂಬಲ್ಲಿ ಮೂರು ದಿನಗಳ ಕಾಲ ವ್ಯಕ್ತಿಯೋರ್ವರ ಮನೆಯಲ್ಲಿ ನಡೆದ ದೈವದ ನೇಮೋತ್ಸವ ಬಳಿಕ ಕಳೆದ ಮಂಗಳವಾರ ಮತ್ತು ಬುಧವಾರ ಪ್ರಭಾವಿ ರಾಜಕಾರಣಿಗಳ, ಉನ್ನತ ಮಟ್ಟದ ಅಧಿಕಾರಿಗಳ ಕೃಪಾಕಟಾಕ್ಷದಲ್ಲಿ ಅಕ್ರಮ ಕೋಳಿ ಅಂಕ ನಡೆಸಲು ನಿರ್ಧರಿಸಲಾಗಿತ್ತು.
ಇದಕ್ಕೆ ಉನ್ನತ ಮಟ್ಟದ ಅಧಿಕಾರಿಗಳ ಶಿಫಾರಸ್ಸು ಪಡೆಯಲಾಗಿತ್ತು. ಆದರೆ ಮಂಗಳವಾರ ನಡೆದ ಅಂಕವನ್ನು ಬುದವಾರ ಮುಂದುವರಿಸಲು ಕಡಬ ಪೊಲೀಸರು ಅವಕಾಶ ನೀಡಲಿಲ್ಲ. ಹೀಗಾಗಿ ಕೋಳಿ ಅಂಕವನ್ನು ಸಂಘಟಿಸಿದ ಮಂದಿ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ತೆರಳಿ ದಂಬಾಲು ಬಿದ್ದದ್ದರು ಆದರೆ ಸಚಿವರು ಇದಕ್ಕೆ ಒಪ್ಪಿಗೆ ಕೊಡದಿದ್ದಾಗ ಬಳಿಕ ಇಲ್ಲಿನ ಪ್ರಭಾವಿ ನಾಯಕರೊಂದಿಗೆ ಕೊಡಗು ಉಸ್ತುವಾರಿ ಸಚಿವರಲ್ಲಿಗೆ ತೆರಳಿ ಅನುಮತಿ ನೀಡಲು ಒತ್ತಡ ಹಾಕಿದ್ದರು.
ಕಡಬ ಪೊಲೀಸರು ಅನುಮತಿ ನೀಡಲು ಜಿಲ್ಲಾ ವರಿಷ್ಠಾಧಿಕಾರಿಗೆ ಆದೇಶ ನೀಡಬೇಕೆಂದು ಒತ್ತಡ ಹೇರಲಾಗಿತ್ತು. ಆದರೆ ಇಲಾಖೆಯ ಮೇಲಾಧಿಕಾರಿಗಳು ಇದಕ್ಕೆ ಅವಕಾಶ ನೀಡಿಲ್ಲ ಎನ್ನಲಾಗಿದೆ. ಈ ನಡುವೆ ಅದ್ದೂರಿಯಾಗಿ ನಡೆಸಲು ಸಿದ್ದತೆ ನಡೆಸಿದ್ದ ಜಾಗದಲ್ಲಿ ಹಾಕಲಾಗಿದ್ದ ಪೆಂಡಾಲ್ ಗಳನ್ನು ಗುರುವಾರ ಬೆಳಿಗ್ಗೆಯೇ ತೆರವುಗೊಳಿಸಲಾಗಿತ್ತು ಎನ್ನಲಾಗಿದೆ. ಪೊಲೀಸ್ ಇಲಾಖೆಯ ಅಧಿಕಾರಿಗಳ ಆದೇಶದಂತೆ ಅಂಕ ನಡೆಯಲಿದ್ದ ಜಾಗದಲ್ಲಿ ಬೀಟ್ ಪೊಲೀಸರು ಗಸ್ತು ನಡೆಸಿದರು.