ಭ್ರಷ್ಟರ ಬೇಟೆಯಾಡಿದ ಎಸಿಬಿ ಅಧಿಕಾರಿಗಳಿಗೆ ಶಾಕ್ | PWD ಎಂಜಿನಿಯರ್ ಮನೆಯ ನೀರಿನ ಪೈಪ್’ನಲ್ಲಿ ಹರಿದು ಬಂತು ಲಕ್ಷ ಲಕ್ಷ ಹಣ
ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ ಸರ್ಕಾರದ ವಿವಿಧ ಇಲಾಖೆಗಳ 15 ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಸಂಪತನ್ನು ಪತ್ತೆಮಾಡಿದ್ದಾರೆ.
ಸಾರ್ವಜನಿಕ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಶಾಂತಗೌಡ ಬಿರಾದರ್ ಅವರ ಮನೆ ಮೇಲೆ ಎಸಿಬಿ ದಾಳಿ ನಡೆಸಿದಾಗ ಅಕ್ಷರಶಃ ನಾಟಕೀಯ ಬೆಳವಣಿಗೆ ನಡೆದಿದ್ದು ಇಡೀ ರಾಜ್ಯದ ಜನತೆ ಕಣ್ಣುಬಾಯಿ ಬಿಟ್ಟು ನೋಡುವಂತೆ ಮಾಡಿದೆ. ಅಕ್ರಮ ಆಸ್ತಿ, ಸಂಪತ್ತು ಗಳಿಕೆಯ ವಾಸನೆಯ ಜಾಡು ಹಿಡಿದು ಹೊರಟ ಎಸಿಬಿ ಅಧಿಕಾರಿಗಳು ನಿನ್ನೆ ಬೆಳಗ್ಗೆ 9 ಗಂಟೆ ಹೊತ್ತಿಗೆ ಶಾಂತಗೌಡ ಅವರ ಮನೆ ಬಾಗಿಲು ಬಡಿದರು. ಆದರೆ 10 ನಿಮಿಷವಾದರೂ ಬಾಗಿಲು ತೆಗೆಯಲಿಲ್ಲ. ಆಗಲೇ ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಂಶಯ ಬಂದಿತ್ತು.
ಮನೆಯೊಳಗೆ ಹೋದವರೇ ಮೂಲೆಮೂಲೆಯಲ್ಲಿ ಹುಡುಕಾಡಿದರು. ಆದರೆ ಏನೂ ಸಂಶಯ ಬರಲಿಲ್ಲ. ನೆರೆಮನೆಯವರಿಂದ ಮಾಹಿತಿ ಪಡೆದು ಎಸಿಬಿ ಸಿಬ್ಬಂದಿ ಶಾಂತಗೌಡ ಅವರ ಮನೆಯಲ್ಲಿ ನೀರು ಹರಿಯದೆ ಇದ್ದ ಪೈಪನ್ನು ತಲಾಶ್ ಮಾಡಲು ಮುಂದಾದರು. ಪೊಲೀಸರು ಪ್ಲಂಬರ್’ನ್ನು ಬರಲು ಹೇಳಿ ನೀರು ಪೈಪ್ ನ್ನು ತುಂಡರಿಸಿದಾಗ ಅಲ್ಲಿ ಸಿಕ್ಕಿದ್ದು ಕಂಡು ನಿಜಕ್ಕೂ ದಂಗಾದರು. ನಲ್ಲಿಯಲ್ಲಿ ನೀರು ಬರುವುದು ಹಳೆ ಕಥೆ, ನಲ್ಲಿಯಲ್ಲಿ ನೋಟು ಬರುವುದು ಹೊಸ ಕಥೆಯೆಂಬಂತೆ 500 ರೂ. ಬಂಡಲ್’ಗಳೇ ಉದುರತೊಡಗಿದವು. ಹೀಗೆ ಹುಡುಕಿದಾಗ ಪೈಪ್ ಒಳಗೆ ಸಿಕ್ಕಿದ್ದು ಬರೋಬ್ಬರಿ 13.50 ಲಕ್ಷ ರೂಪಾಯಿ.
15 ಅಧಿಕಾರಿಗಳ ನಿವಾಸ ಮೇಲೆ ದಾಳಿ ನಡೆಸಿ ಸಿಕ್ಕಿದ ಅಕ್ರಮ ಆಸ್ತಿ, ನಗ-ನಾಣ್ಯಗಳಲ್ಲಿ 1 ಕೋಟಿಯ 53 ಲಕ್ಷದ 89 ಸಾವಿರ ನಗದು ಮತ್ತು 16.495 ಕೆಜಿ ಚಿನ್ನವಾಗಿದೆ.