ಖ್ಯಾತ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಗೆ ಐಸಿಸ್ ಉಗ್ರರಿಂದ ಜೀವ ಬೆದರಿಕೆ !!| ಗಂಭೀರ್ ನಿವಾಸದ ಬಳಿ ಭದ್ರತೆ ಹೆಚ್ಚಿಸಿದ ದೆಹಲಿ ಪೊಲೀಸರು
ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟ್ ದಿಗ್ಗಜ ಎಡಗೈ ಬ್ಯಾಟರ್ ಹಾಗೂ ಪೂರ್ವ ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ಗೆ ಕಾಶ್ಮೀರ್ ಐಸಿಸ್ ಉಗ್ರರು ಕೊಲೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು, ಸಂಸದ ದೆಹಲಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.
ಮಂಗಳವಾರ ಸಂಜೆ ಗೌತಮ್ ಗಂಭೀರ್ ಅಧಿಕೃತ ಇ-ಮೇಲ್ ಖಾತೆಯ ಮೂಲಕ ಐಸಿಸ್ ಕಾಶ್ಮೀರ್ ಹೆಸರಿನಲ್ಲಿ ಉಗ್ರರು ಜೀವ ಬೆದರಿಕೆ ಹಾಕಿದ್ದು, ಸಂಸದ ಹಾಗೂ ಅವರ ಕುಟುಂಬದ ಮೇಲೆ ಜೀವಬೆದರಿಕೆ ಹಾಕಲಾಗಿದೆ. ಹೀಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಸೆಂಟ್ರಲ್ ಡಿಸ್ಟ್ರಿಕ್ಟ್ ಡಿಸಿಪಿಗೆ ಗೌತಮ್ ಗಂಭೀರ್ ಅವರ ಆಪ್ತ ಸಹಾಯಕ ಗೌರವ್ ಅರೋರಾ ಮನವಿ ಮಾಡಿಕೊಂಡಿದ್ದರು. ಜೊತೆಗೆ ತಮಗೆ ಹೆಚ್ಚುವರಿ ಭದ್ರತೆ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಗೌತಮ್ ಗಂಭೀರ್, ಭಾರತ ಹಾಗೂ ಪಾಕ್ ಗಡಿಯಲ್ಲಿ ನಡೆಯುತ್ತಿರುವ ಪಾಕ್ ಪ್ರೇರಿತ ಭಯೋತ್ಪಾದನೆಯ ಕುರಿತಂತೆ ಪದೇ ಪದೇ ಧ್ವನಿಯೆತ್ತುತ್ತಲೇ ಬಂದಿದ್ದು,ಕಳೆದ ಫೆಬ್ರವರಿಯಲ್ಲಿ ಗೌತಮ್ ಗಂಭೀರ್, ಗಡಿಯಲ್ಲಿ ಪಾಕ್ ಪ್ರೇರಿತ ಭಯೋತ್ಫಾದನೆ ನಿಲ್ಲುವವರೆಗೂ ಪಾಕಿಸ್ತಾನದ ಜೊತೆ ಯಾವುದೇ ವ್ಯಾಪಾರ ವಹಿವಾಟುಗಳನ್ನು ಇಟ್ಟುಕೊಳ್ಳಬಾರದು ಎಂದು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.ಭಾರತ ಸೈನಿಕರ ಜೀವಕ್ಕಿಂತ ಮಹತ್ವವಾದ್ದದ್ದೂ ಬೇರೇನು ಇಲ್ಲ ಎಂದು ಹೇಳಿದ್ದರು.
ಇದೀಗ ಅದೇ ವಿಚಾರವಾಗಿ ಗಂಭೀರ್ಗೆ ಜೀವ ಬೆದರಿಕೆ ಬಂದಿದೆಯೇ ಎಂಬ ಪ್ರಶ್ನೆ ಎದ್ದು ಕಾಣುತ್ತಿದ್ದು, ರಾಜಕೀಯ ವಲಯದಲ್ಲಿ ಸಂಚಲನಕ್ಕೀಡು ಮಾಡಿಕೊಟ್ಟಿದೆ. ಈ ಪ್ರಕರಣದ ತನಿಖೆ ಆರಂಭವಾಗಿದ್ದು,ಗೌತಮ್ ಗಂಭೀರ್ ನಿವಾಸದ ಬಳಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಡಿಸಿಪಿ ಶ್ವೇತಾ ಚೌಹ್ಹಾಣ್ ತಿಳಿಸಿದ್ದಾರೆ.