ಕೇವಲ 99 ರೂ. ಇಯರ್ ಫೋನ್ ಆಸೆಗೆ ಬಿದ್ದು 33 ಲಕ್ಷ ರೂ. ಕಳೆದುಕೊಂಡ ಮಹಿಳೆ!! | ಗಂಡ ಮಾಡಿಸಿದ ಜೀವ ವಿಮೆಯ ಹಣವನ್ನು ಸಂಪೂರ್ಣ ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕುಳಿತ ಕುಟುಂಬ
ಕಡಿಮೆ ಬೆಲೆಗೆ ಇಯರ್ ಫೋನ್ ಖರೀದಿಸುವ ಆಸೆಗೆ ಬಿದ್ದ ಮಹಿಳೆಯೋರ್ವಳು ಲಕ್ಷಾಂತರ ರೂಪಾಯಿ ಕಳೆದುಕೊಂಡು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ವರ್ಷದ ಹಿಂದಷ್ಟೇ ಅನಾರೋಗ್ಯದಿಂದ ಗಂಡನನ್ನು ಕಳೆದುಕೊಂಡ ಅವಿದ್ಯಾವಂತೆ ಮಹಿಳೆಯು ತನ್ನ ಮೂವರು ಮಕ್ಕಳ ಜವಾಬ್ದಾರಿಯನ್ನು ಹೊತ್ತಿದ್ದಳು. ಆಕೆಯ ಗಂಡ ಮಾಡಿಸಿದ್ದ ಜೀವ ವಿಮೆಯೇ ಆಸರೆಯಾಗಿತ್ತು. ಆದರೆ, ಕಡಿಮೆ ಬೆಲೆಗೆ ಇಯರ್ ಫೋನ್ ಖರೀದಿಸುವ ಆಸೆಗೆ ಬಿದ್ದ ಮಹಿಳೆ ತನ್ನ ಎರಡು ಬ್ಯಾಂಕ್ ಖಾತೆಗಳಲ್ಲಿದ್ದ 33 ಲಕ್ಷ ರೂ. ಹಣವನ್ನು ಕಳೆದುಕೊಂಡ ಕಂಗಾಲಾಗಿದ್ದಾಳೆ. ಸೈಬರ್ ಖದೀಮರ ಜಾಲಕ್ಕೆ ಸುಲಭವಾಗಿ ಬಿದ್ದ ಮಹಿಳೆ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.
32 ವರ್ಷದ ಕಾರ್ಮಿಕ ಗುತ್ತಿದಾಗ ಮೌಲಾಲಿ ಎಂಬಾತ ಕಳೆದ ನವೆಂಬರ್‌ನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದ. ಬದುಕಿರುವಾಗಲೇ ಮೌಲಾಲಿ ವಿಮೆ ಮಾಡಿಸಿದ್ದರಿಂದ ಆತನ ಪತ್ನಿಗೆ ವಿಮಾ ಕಂಪನಿಯಿಂದ 50 ಲಕ್ಷ ರೂ. ಹಣ ಸಿಕ್ಕಿತ್ತು. ಹಣ ಮಡೆದಿದ್ದ ಮಹಿಳೆ ಮಕ್ಕಳ ಹೆಸರಿನಲ್ಲಿ 10 ಲಕ್ಷ ರೂ. ಸ್ಥಿರ ಠೇವಣಿ ಇಟ್ಟಿದ್ದಳು. ಉಳಿದ ಹಣವನ್ನು ಎರಡು ಬ್ಯಾಂಕ್ ಖಾತೆಗಳಲ್ಲಿ ಇಟ್ಟಿದ್ದಳು. ಹೀಗಿರುವಾಗ ಆಕೆಯ 8ನೇ ತರಗತಿಯ ಮಗಳು ತಾಯಿಯ ಮೊಬೈಲ್ ತೆಗೆದುಕೊಂಡು ಆನ್‌ಲೈನ್ ಕ್ಲಾಸ್ ಸಲುವಾಗಿ ಆನ್‌ಲೈನ್ ನಲ್ಲಿ ಹೆಡ್‌ಫೋನ್ ಬುಕ್ ಮಾಡಲು ಮುಂದಾಗಿದ್ದಳು. ಆದರೆ, ಬೆಲೆ ಹೆಚ್ಚಾಗಿದ್ದರಿಂದ ತಾಯಿ ಬೇಡ ಎಂದಿದ್ದಕ್ಕೆ ಸುಮ್ಮನಾಗಿದ್ದಳು. ಆದರೆ, ಯಾವುದೋ ವೆಬ್‌ಸೈಟ್ ಒಂದರಲ್ಲಿ ಕೇವಲ 99 ರೂ. ಹೆಡ್‌ಫೋನ್ ಸಿಗುತ್ತದೆ ಎಂಬುದನ್ನು ನೋಡಿದ ಆಕೆ ಹಿಂದು-ಮುಂದು ನೋಡದೇ ಬುಕ್ ಮಾಡಿ ಇಯರ್ ಫೋನ್ ಖರೀದಿಸಿದ್ದಳು.
ಇದಾದ ಕೆಲವು ದಿನಗಳ ನಂತರ ಮಹಿಳೆ ಹಣ ತರಲೆಂದು ಬ್ಯಾಂಕ್‌ಗೆ ಹೋಗಿದ್ದಾಳೆ. ಆದರೆ, ಎರಡು ಬ್ಯಾಂಕ್ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ತೋರಿದ್ದನ್ನು ನೋಡಿ ಮಹಿಳೆ ಶಾಕ್ ಆಗಿದ್ದಾಳೆ. ಕೇವಲ 15 ದಿನದಲ್ಲೇ ಆಕೆಯ ಖಾತೆಯಿಂದ ಒಟ್ಟು 33 ಲಕ್ಷ ರೂ. ನಾಪತ್ತೆಯಾಗಿದೆ. ಇದರಿಂದ ಗಾಬರಿಗೊಂಡ ಮಹಿಳೆ ರಾಚಕೊಂಡ ಸೈಬರ್ ಕೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಸೈಬರ್ ಖದೀಮರು ಆಕೆ ಎರಡು ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಹಣ ಎಗರಿಸಿರುವುದು ಗೊತ್ತಾಗಿದೆ.
ಅಷ್ಟಕ್ಕೂ ಆಗಿದ್ದೇನು??
ಇಯರ್ ಫೋನ್ ಖರೀದಿಸಿದ ಬಳಿಕ ಅಶೋಕ್ ಎಂಬ ವ್ಯಕ್ತಿ ಮಹಿಳೆಯ ನಂಬರ್‌ಗೆ ಕರೆ ಮಾಡಿದ್ದಾನೆ. ನೀವು ಆನ್ ಲೈನ್‌ನಲ್ಲಿ ಇಯರ್ ಫೋನ್ ಖರೀದಿಸಿದ್ದಕ್ಕೆ ನಿಮಗೆ 15 ಲಕ್ಷ ಮೌಲ್ಯದ ಕಾರು ಬಹುಮಾನವಾಗಿ ಬಂದಿದೆ. ನಿಮಗೆ ಕಾರು ಬೇಡವಾದರೆ ಹಣವನ್ನು ಪಡೆಯಬಹುದು. ನಾವು ಕಳುಹಿಸಿರುವ ಎಸ್ಎಂಎಸ್ ಅನ್ನು ಕ್ಲಿಕ್ ಮಾಡಿ ಬ್ಯಾಂಕ್ ಖಾತೆಯ ಮಾಹಿತಿಯನ್ನು ಅಪ್‌ಲೋಡ್ ಮಾಡಿ ಬಹುಮಾನದ ಮೊತ್ತವನ್ನು ನಿಮ್ಮ ಖಾತೆಗೆ ಹಾಕುತ್ತೇವೆ ಎಂದು ಹೇಳಿದ್ದಾನೆ. ಆಕೆ ಅವಿದ್ಯಾವಂತೆ ಆಗಿದ್ದರಿಂದ ಮಗಳ ಕೈಗೆ ಫೋನ್ ನೀಡಿದ್ದಾಳೆ.
ಇತ್ತ ಕರೆ ಮಾಡಿದವನ ಮಾತಿಗೆ ಮರುಳಾದ ಮಹಿಳೆ ಮತ್ತು ಆಕೆಯ ಮಗಳು ಎನಿ ಡೆಸ್ಕ್ ಆ್ಯಪ್ ಡೌನ್‌ಲೋಡ್ ಮಾಡಿ ಸೈಬರ್ ಖದೀಮರು ಹೇಳಿದಂತೆ ತಮ್ಮ ಬ್ಯಾಂಕ್ ಖಾತೆಯ ಮಾಹಿತಿ, ಡೆಬಿಟ್ ಕಾರ್ಡ್ ಮತ್ತು ಒಟಿಪಿಯನೆಲ್ಲಾ ನೀಡಿದ್ದಾರೆ. ಅವರು ಹೇಳಿದ ಎಲ್ಲ ಮಾಹಿತಿಯನ್ನು ಇಂಟರ್ನೆಟ್ ಬ್ಯಾಂಕಿಂಗ್‌ನಲ್ಲಿ ನಮೂದಿಸಿದ ಬಿಹಾರದ ಸೈಬರ್ ಗ್ಯಾಂಗ್ ಮೊದಲು ಖಾತೆಯ ಫೋನ್ ನಂಬರ್ ಬದಲಾಯಿಸಿ, ಬಳಿಕ ಫೋನ್ ಪೇ ಮತ್ತು ಗೂಗಲ್ ಪೇ ಅನ್ನು ಡೌನ್‌ಲೋಡ್ ಮಾಡಿಕೊಂಡು ಖಾತೆಯಲ್ಲಿ ಹಣವನ್ನೆಲ್ಲ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಇದಿಷ್ಟು ಕೃತ್ಯವನ್ನು ಬಿಹಾರದಿಂದ ಎಸಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ತನಿಖೆ ನಡೆಸುತ್ತಿದ್ದಾರೆ.
ಒಟಿಪಿ, ಡೆಬಿಟ್ ಕಾರ್ಡ್ ನಂಬರ್ ಅನ್ನು ಯಾರೇ ಕೇಳಿದರೂ ಸ್ವತಃ ಬ್ಯಾಂಕ್‌ನವರು ಕೇಳಿದರೂ ಕೊಡಬೇಡಿ ಎಂದು ಬ್ಯಾಂಕ್‌ನವರು ಎಷ್ಟು ಬಾರಿ ಹೇಳಿದರೂ ಕೇಳದೇ ಎಲ್ಲವನ್ನು ನೀಡಿ ಇದೀಗ ಹಣ ಕಳೆದುಕೊಂಡು ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಈ ಘಟನೆ ಅದೆಷ್ಟೋ ಜನರಿಗೆ ಪಾಠ ವಾಗಬೇಕಿದೆ. ಯಾರೇ ಡೆಬಿಟ್ ಕಾರ್ಡ್ ನಂಬರ್, ಓಟಿಪಿ ಕೇಳಿದರೂ ಸಹ ದಯಮಾಡಿ ನೀಡಬೇಡಿ. ಇಲ್ಲದಿದ್ದರೆ ನೀವು ಕೂಡ ಇಂತಹ ಸಂಕಷ್ಟಕ್ಕೆ ಸಿಲುಕುವುದು ಖಂಡಿತ.