ಶಬರಿಮಲೆ : ಯಾತ್ರಾರ್ಥಿಗಳಿಗೆ ಸ್ಪಾಟ್ ಬುಕಿಂಗ್ ಸೌಲಭ್ಯ
ತಿರುವನಂತಪುರ : ಶಬರಿಮಲೆ ಯಾತ್ರಾರ್ಥಿಗಳಿಗೆ ಸ್ಪಾಟ್ ಬುಕಿಂಗ್ ಸೌಲಭ್ಯ ಗುರುವಾರದಿಂದ ಆರಂಭಗೊಂಡಿದೆ. ಈ ಸೌಲಭ್ಯವು ತಿರುವನಂತಪುರಂ, ಪತ್ತಣಂತಿಟ್ಟ ಎರುಮೆಲಿ, ಕುಮಿಲಿ, ನೀಲಕ್ಕಲ್, ಕೊಟ್ಟರಕ್ಕರ, ಪಂದಲ, ವಲಿಯ ಕೊಯಿಕ್ಕಲ್ ಪ್ಯಾಲೆಸ್, ಚೆಂಗನ್ನೂರು, ಎಟ್ಮಾನೂರು ಮತ್ತು ಪೆರುಂಬವೂರು ಇಲ್ಲಿ ಲಭ್ಯವಿವೆ.
ಈ ಹಿಂದೆ ರಾಜ್ಯ ಸರಕಾರ ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಶಬರಿಮಲೆ ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತಿತ್ತು. ಈ ವ್ಯವಸ್ಥೆಯ ನಿರ್ವಹಣೆಯನ್ನು ಬೇರೆಯವರಿಗೆ ವಹಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸಂದರ್ಭ ರಾಜ್ಯ ಸರಕಾರ ಹೊಸ ಸ್ಪಾಟ್ ಬುಕಿಂಗ್ ಕುರಿತು ಮಾಹಿತಿ ನೀಡಿದೆ.
ಸ್ಪಾಟ್ ಬುಕಿಂಗ್ ಜತೆಗೆ ಈ ಹಿಂದಿನ ವರ್ಚುವಲ್ ವ್ಯವಸ್ಥೆ ಮುಂದುವರಿಯಲಿದೆ. ವರ್ಚುವಲ್ ಕ್ಯೂ ಬುಕಿಂಗ್ ಅನ್ನು ಯಾರಾದರೂ ರದ್ದುಗೊಳಿಸಿದಲ್ಲಿ ಆ ಸ್ಲಾಟ್ ಅನ್ನು ಸ್ಪಾಟ್ ಬುಕಿಂಗ್ ಮೂಲಕ ಒದಗಿಸಲಾಗುತ್ತದೆ.
ಸ್ಪಾಟ್ ಬುಕಿಂಗ್ ಸಂದರ್ಭ ಯಾತ್ರಾರ್ಥಿಗಳು ತಮ್ಮಆಧಾರ್, ಮತದಾರರ ಗುರುತುಪತ್ರ ಅಥವಾ ಪಾಸ್ಪೋರ್ಟುಗಳನ್ನು ಹಾಜರುಪಡಿಸಬಹುದು. ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದ ಪ್ರಮಾಣಪತ್ರ ಅಥವಾ 72 ಗಂಟೆಗಿಂತ ಹಳೆಯದಾಗಿರದ ಆರ್ಟಿ ಪಿಸಿಆರ್ ನೆಗೆಟಿವ್ ವರದಿ ಹಾಜರುಪಡಿಸಬೇಕಿದೆ.