ನ. 29ರಿಂದ ಡಿ. 4ರ ವರೆಗೆ ಧರ್ಮಸ್ಥಳ ಲಕ್ಷದೀಪೋತ್ಸವ |ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಉಪಸ್ಥಿತಿ
ಮಂಗಳೂರು : ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವದ ಕಾರ್ಯಕ್ರಮಗಳು ನ. 29ರಿಂದ ಡಿ. 4ರ ವರೆಗೆ ನಡೆಯಲಿದ್ದು, ಡಿ. 3ರಂದು ಲಕ್ಷದೀಪೋತ್ಸವ ನಡೆಯಲಿದೆ.
ಡಿ. 2ರಂದು ಸಂಜೆ 5ಕ್ಕೆ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಉದ್ಘಾಟಿಸಲಿದ್ದು, ಬೆಂಗಳೂರಿನ ಎಸ್.ವ್ಯಾಸಯೋಗ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ| ರಾಮಚಂದ್ರ ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಗರದ ಸಾಹಿತಿ ಸಫ್ರಾಜ್ ಚಂದ್ರಗುತ್ತಿ, ಮೈಸೂರು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕಿ ಡಾ| ಎಂ.ಎಸ್. ಪದ್ಮಾ, ಶಿವಮೊಗ್ಗ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ| ವೀರೇಶ್ ವಿ. ಮೊರಾಸ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ನ.3ರಂದು ಸಾಹಿತ್ಯ ಸಮ್ಮೇಳನದ 89ನೇ ಅಧಿವೇಶನವನ್ನು ಆರೋಗ್ಯ ಸಚಿವ ಡಾ| ಕೆ.ಸುಧಾಕರ್ ಉದ್ಘಾಟಿಸಲಿದ್ದು, ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿ.ವಿ.ಯ ವಿಶ್ರಾಂತ ಕುಲಪತಿ ಡಾ| ಮಲ್ಲೇಪುರಂ ಜಿ. ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಗರದ ಸಾಹಿತಿ ಡಾ| ಪಿ. ಗಜಾನನ ಶರ್ಮ, ಚಿತ್ರದುರ್ಗದ ಡಾ| ಪಿ. ಚಂದ್ರಿಕಾ ಮತ್ತು ಬೆಂಗಳೂರಿನ ಡಾ| ಕೆ.ಪಿ. ಪುತ್ತೂರಾಯ ಉಪನ್ಯಾಸ ನೀಡಲಿದ್ದಾರೆ.
ಪ್ರತಿ ದಿನ ರಾತ್ರಿ 9ರಿಂದ ಉತ್ಸವಗಳು ನಡೆಯಲಿದ್ದು, ನ. 29ರಂದು ಹೊಸಕಟ್ಟೆ ಉತ್ಸವ, ನ.30ರಂದು ಕೆರೆಕಟ್ಟೆ ಉತ್ಸವ, ಡಿ.1ರಂದು ಲಲಿತೋದ್ಯಾನ ಉತ್ಸವ, ಡಿ.2ರಂದು ಕಂಚಿಮಾರುಕಟ್ಟೆ ಉತ್ಸವ, ಡಿ. 3ರಂದು ಗೌರಿಮಾರುಕಟ್ಟೆ ಉತ್ಸವ, ಲಕ್ಷ ದೀಪೋತ್ಸವ, ಡಿ.4ರಂದು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೊಂದಿಗೆ ಲಕ್ಷ ದೀಪೋತ್ಸವ ಸಮಾಪನಗೊಳ್ಳಲಿದೆ.