ಮೂಲ್ಕಿ : ಕಣಜದ ಹುಳುವಿನ ದಾಳಿಯಿಂದ ಆರು ವಿದ್ಯಾರ್ಥಿಗಳನ್ನು ಬಚಾವ್ ಮಾಡಿದ ಗ್ರಹರಕ್ಷಕದಳ ಸಿಬ್ಬಂದಿ | ತನ್ನ ಜೀವ ಪಣಕ್ಕಿಟ್ಟು ಕಾಪಾಡಿದಾತ ಕಣಜದ ಕಡಿತವನ್ನು ನಿರ್ಲಕ್ಷಿಸಿ ಸಾವು
ಮೂಲ್ಕಿ:ಕಣಜದ ಹುಳುವಿನ ದಾಳಿಯಿಂದ,ತನ್ನ ಜೀವ ಪಣಕಿಟ್ಟು ಆರು ವಿದ್ಯಾರ್ಥಿಗಳ ಜೀವ ಉಳಿಸಿದ ಕಿನ್ನಿಗೋಳಿ ಸಮೀಪದ ಶ್ರೀ ರಾಮ ಮಂದಿರದ ಗೃಹರಕ್ಷಕ ದಳ ಸಿಬ್ಬಂದಿಯೊಬ್ಬರು ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.
ಕಟೀಲು ಬಳಿಯ ಎಕ್ಕಾರು ದೇವರಗುಡ್ಡೆ ನಿವಾಸಿ ಸಂತೋಷ್ (35) ಮೃತಪಟ್ಟವರಾಗಿದ್ದು,ಇವರು ಮಂಗಳೂರಿನ ಕಂಕನಾಡಿ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿದ್ದರು.
ಸಂತೋಷ್ ಬುಧವಾರ ಸಂಜೆ ಶ್ರೀರಾಮ ಮಂದಿರ ಬಳಿ ಆಟೋದಲ್ಲಿ ಹೋಗುತ್ತಿದ್ದಾಗ ಕಣಜದ ಹುಳುಗಳ ದಾಳಿಗೊಳಗಾಗಿ ಕಿನ್ನಿಗೋಳಿ ಪರಿಸರದ ಶಾಲೆಯ ಕೆಲ ಮಕ್ಕಳು ಗಂಭೀರಾವಸ್ಥೆಯಲ್ಲಿದ್ದುದನ್ನು ಕಂಡು,ಮಕ್ಕಳನ್ನು ಕಣಜದ ಹುಳುಗಳಿಂದ ರಕ್ಷಿಸಿ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಕ್ಕಳ ರಕ್ಷಣೆಯ ಸಂದರ್ಭ ಕಣಜದ ಹುಳು ಸಂತೋಷ್ ಅವರಿಗೂ ಕಡಿದಿತ್ತು.ಆದರೆ ಅವರು ನಿರ್ಲಕ್ಷದಿಂದ ಯಾವುದೇ ಚಿಕಿತ್ಸೆ ಪಡೆಯದೆ ಮನೆ ಕಡೆ ತೆರಳಿದ್ದರೆನ್ನಲಾಗಿದೆ.ಮನೆಯಲ್ಲಿ ರಾತ್ರಿ ಸುಮಾರು 9 ಗಂಟೆಗೆ ಕುರ್ಚಿಯಲ್ಲಿ ಕುಳಿತ್ತಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಆರು ಮಕ್ಕಳ ರಕ್ಷಣೆ ಮಾಡಿದ ಸಂತೋಷ್ ಅವರ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದು,ಮೃತರು ತಾಯಿ, ಪತ್ನಿ, ಮೂವರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.