ನ.21 : ಕ.ಸಾ.ಪ.ಕೇಂದ್ರ ಹಾಗೂ ಜಿಲ್ಲಾ ಅಧ್ಯಕ್ಷರ ಆಯ್ಕೆಗೆ ಚುನಾವಣೆ

ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಹಾಗೂ ಜಿಲ್ಲಾ ಅಧ್ಯಕ್ಷರ ಚುನಾವಣೆ ನ.21ರಂದು ನಡೆಯಲಿದೆ. ಮತದಾರರಿಗೆ ಜಿಲ್ಲೆ ಮತ್ತು ಕೇಂದ್ರ ಅಧ್ಯಕ್ಷರಿಗೆ ಮತದಾನ ಮಾಡುವ ಅವಕಾಶಗಳಿವೆ. ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಚುನಾವಣೆ ನಡೆಯಲಿದೆ.

ಮತದಾನ ಮುಗಿದ ಕೂಡಲೇ ಆಯಾ ಮತಗಟ್ಟೆಗಳಲ್ಲಿ ಮತ ಎಣಿಕೆ ನಡೆಯಲಿದೆ. ಎಲ್ಲ ಸಹಾಯಕ ಚುನಾವಣಾಧಿಕಾರಿಯವರಿಂದ ಮತ ಎಣಿಕೆ ವಿವರವನ್ನು ಅಧಿಕೃತ ನಮೂನೆಯಲ್ಲಿ ಪಡೆದು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ವಿಜೇತರ ಹೆಸರನ್ನು ಘೋಷಣೆ ಮಾಡಲಾಗುವುದು ಹಾಗೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮತ ಎಣಿಕೆ ವಿವರಗಳನ್ನು ಬೆಂಗಳೂರಿನ ಕೇಂದ್ರ ಚುನಾವಣಾ ಕಚೇರಿಗೆ ಫಲಿತಾಂಶ ಘೋಷಣೆಗೆ ಕಳುಹಿಸಲಾಗುತ್ತದೆ.

ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯ ಮತ್ತು ಜಿಲ್ಲಾಧ್ಯಕ್ಷ ಹುದ್ದೆಗೆ ಮಾತ್ರ ಚುನಾವಣೆ ನಡೆಯಲಿದ್ದು ತಾಲೂಕು ಅಧ್ಯಕ್ಷರುಗಳನ್ನು ನೂತನ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ನೇಮಕ ಮಾಡಲಾಗುತ್ತದೆ.

ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯರಾಗಿದ್ದು, ಈಗಾಗಲೇ ಪ್ರಕಟಗೊಂಡಿರುವ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಮತಚಲಾಯಿಸಲು ಅರ್ಹರಾಗಿರುತ್ತಾರೆ.

ಉಡುಪಿ ಜಿಲ್ಲೆ: 1,987 ಮತದಾರರು
ಜಿಲ್ಲೆಯಲ್ಲಿ ಒಟ್ಟು 1,987 ಮಂದಿ ಮತದಾರರಿದ್ದು ಜಿಲ್ಲೆಯ 8 ಮತಗಟ್ಟೆ ಕೇಂದ್ರಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ಏಳು ತಾಲೂಕುಗಳ ಮತದಾರರಿಗೆ ತಾಲೂಕು ಕಚೇರಿ ಮತ್ತು ಕೋಟ ಹೋಬಳಿಗೆ ಸಾಲಿಗ್ರಾಮ ಪ.ಪಂ. ಕಚೇರಿ ಮತಗಟ್ಟೆಗಳಾಗಿವೆ.

ಉಡುಪಿ ಜಿಲ್ಲೆಯಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಸಾಪ ಪದಾಧಿಕಾರಿಗಳಾಗಿದ್ದ ಡಾ| ಸುಬ್ರಹ್ಮಣ್ಯ ಭಟ್‌, ಕೆ.ಎಸ್‌. ಸುಬ್ರಹ್ಮಣ್ಯ ಬಾಸ್ರಿ ಸ್ಪರ್ಧಿಗಳಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರದೀಪ್‌ ಕುರುಡೇಕರ್‌ ತಿಳಿಸಿದ್ದಾರೆ.

ದ.ಕ. ಜಿಲ್ಲೆ: 4,538 ಮತದಾರರು
ಜಿಲ್ಲೆಯಲ್ಲಿ ಒಟ್ಟು 10 ಮತದಾನ ಕೇಂದ್ರಗಳನ್ನು ವ್ಯವಸ್ಥೆಗೊಳಿಸಲಾಗಿದ್ದು ಒಟ್ಟು 4,538 ಮತದಾರರು ಮತ ಚಲಾಯಿಸಲಿದ್ದಾರೆ. ಮಂಗಳೂರು ಮಿನಿವಿಧಾನಸೌಧ ದಲ್ಲಿರುವ ತಾಲೂಕು ಕಚೇರಿ ಸಭಾಂಗಣ, ಮುಲ್ಕಿ ನಗರ‌ ಪಂ.ನ ಸಮುದಾಯ ಭವನ, ಮೂಡುಬಿದಿರೆ, ಬಂಟ್ವಾಳದಲ್ಲಿ ತಾಲೂಕು ಕಚೇರಿ ಸಭಾಂಗಣ, ವಿಟ್ಲ ಪ. ಪಂ., ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕು ಕಚೇರಿ ಸಭಾಂಗಣ, ಕೊಕ್ಕಡದಲ್ಲಿ ನಾಡಕಚೇರಿ, ಕಡಬದಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಮತದಾನ ಕೇಂದ್ರಗಳಿರುತ್ತವೆ.

ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಹುದ್ದೆಗೆ ಉಜಿರೆಯ ಉಪನ್ಯಾಸಕ, ಲೇಖಕ ಎಂ.ಪಿ. ಶ್ರೀನಾಥ್‌ ಹಾಗೂ ಮಂಗಳೂರು ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ, ಲೇಖಕ ಎಂ.ಆರ್‌.ವಾಸುದೇವ ಅವರು ಸ್ಪರ್ಧಿಸುತ್ತಿದ್ದಾರೆ ಎಂದು ಚುನಾವಣಾಧಿಕಾರಿ ಟಿ.ಜಿ. ಗುರುಪ್ರಸಾದ್‌ ತಿಳಿಸಿದ್ದಾರೆ.

Leave A Reply

Your email address will not be published.