ಶಾಲೆಯಲ್ಲಿ ಶಿಕ್ಷಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ | ಮಕ್ಕಳನ್ನು ಶಾಲೆಗೆ ಕಳುಹಿಸದೇ ಪೋಷಕರಿಂದ ಪ್ರತಿಭಟನೆ
ಕಡಬ : ಶಿಕ್ಷಕರ ಮೇಲಿನ ಅಸಮಾಧಾನದಿಂದ ಪೋಷಕರು ಪ್ರತಿಭಟನೆ ನಡೆಸುತ್ತಿದ್ದ ಹರಿಹರ ಪಲ್ಲತ್ತಡ್ಕ ಸ.ಪ್ರಾ.ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ಭೇಟಿ ನೀಡಿ ಪೋಷಕರೊಂದಿಗೆ ಮಾತುಕತೆ ನಡೆಸಿದ್ದಾರೆ.
ಆದರೆ ಎಲ್ಲಾ ಸಮಸ್ಯೆ ಬಗೆಹರಿಸದೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ನಕಾರ ಸೂಚಿಸಿದ್ದಾರೆ.
ಹರಿಹರ ಪಲ್ಲತ್ತಡ್ಕ ಶಾಲೆಯ ಮೂವರು ಶಿಕ್ಷಕರು ಶಾಲೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಪೋಷಕರು ಮಂಗಳವಾರ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ತಾವೇ ಶಾಲೆಗೆ ಬಂದು ಪ್ರತಿಭಟನೆ ಆರಂಭಿಸಿದ್ದರು. ಈ ವಿಷಯ ತಿಳಿದ ಕ್ಷೇತ್ರ ಶಿಕ್ಷಾಧಿಕಾರಿ ಎಸ್.ಪಿ. ಮಹಾದೇವರವರು ಶಾಲೆಗೆ ಆಗಮಿಸಿ ಶಾಲಾ ಹೊರಭಾಗದಲ್ಲಿ ಸೇರಿದ್ದ ಪೋಷಕರೊಂದಿಗೆ ಮಾತುಕತೆ ನಡೆಸಿದರು.
ತಕ್ಷಣದಿಂದಲೇ ಓರ್ವ ಶಿಕ್ಷಕರು ಡೆಪ್ಯೂಟೇಶನ್ ಮೇಲೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇಲ್ಲಿನ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸುವುದಾಗಿ ಅವರು ಭರವಸೆ ನೀಡಿದರು. ಆದರೆ ಪಟ್ಟುಬಿಡದ ಪೋಷಕರು ಪರ್ಮನೆಂಟ್ ಶಿಕ್ಷಕರನ್ನು ಕೊಡುವಲ್ಲಿವರೆಗೆ, ಇಲ್ಲಿರುವ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವವರೆಗೆ, ಮತ್ತು ಸಮಸ್ಯೆ ಬಗೆಹರಿಯುವವರೆಗೆ ತಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಪಟ್ಟು ಹಿಡಿದಿದ್ದಾರೆ.