ಮಂಗಳೂರು : ಡಾ. ಎಂ.ಎನ್. ರಾಜೇಂದ್ರ ಕುಮಾರ್‌ ವಿಧಾನ ಪರಿಷತ್ ಚುನಾವಣಾ ಕಾರ್ಯಾಲಯ ಉದ್ಘಾಟನೆ

Share the Article

ಮಂಗಳೂರು : ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ವಿಧಾನ ಪರಿಷತ್ ಚುನಾವಣಾ ಕಾರ್ಯಾಲಯದ ಉದ್ಘಾಟನೆ ನ.16ರಂದು ಮಂಗಳೂರಿನ “ಇನ್‌ಲ್ಯಾಂಡ್ ಓರ್ನೆಟ್” ನಲ್ಲಿ ನಡೆಯಿತು.

ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ, ಸಹಕಾರಿ ಧುರೀಣ ಡಾ.ಎಂ.ಎನ್. ರಾಜೇಂದ್ರ ಕುಮಾರ್‌ರ ವಿಜಯ ಯಾತ್ರೆಯು ಇಲ್ಲಿಂದಲೇ ಆರಂಭಗೊಂಡಿದೆ. ಪ್ರಾಮಾಣಿಕ ಜನ ಸೇವಕ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಪಕ್ಷಾತೀತ ವ್ಯಕ್ತಿ. ಸಮಾಜ ಸೇವಕರಿಗೆ ಯಾವುದೇ ಪಕ್ಷದ ಅಗತ್ಯವಿಲ್ಲ, ಜನಸಾಮಾನ್ಯರ ಸಹಕಾರವೇ ಶಕ್ತಿಯಾಗಿದೆ. ಈ ಶಕ್ತಿಯಿಂದಲೇ ರಾಜೇಂದ್ರ ಕುಮಾರ್ ವಿಧಾನ ಪರಿಷತ್ ಸದಸ್ಯರಾಗಿ ಗೆದ್ದು ಸಚಿವರಾಗಿ ಜನಸೇವೆ ಮುಂದುವರಿಸಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಅಭ್ಯರ್ಥಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಮಾತನಾಡಿ ಸಹಕಾರಿ ಕ್ಷೇತ್ರಕ್ಕೆ ವಿಧಾನ ಪರಿಷತ್‌ನಲ್ಲಿ ಅವಕಾಶ ಕೊಡಿ ಎಂದು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾರೂ ಸ್ಪಂದಿಸಲಿಲ್ಲ. ಹಾಗಾಗಿ ಸಹಕಾರಿಗಳ, ಸರ್ವ ಪಕ್ಷಗಳ, ಸಾಮಾಜಿಕ, ಧಾರ್ಮಿಕ ಮುಖಂಡರ ಒತ್ತಡಕ್ಕೆ ಮಣಿದು ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಹಾಗಾಗಿ ಎಲ್ಲಾ ಪಕ್ಷದವರೂ ನನ್ನ ಗೆಲುವಿಗೆ ಶ್ರಮಿಸಬೇಕು. ಗೆದ್ದ ಬಳಿಕ ಅಭಿವೃದ್ಧಿಗಾಗಿ ಶಕ್ತಿಮೀರಿ ಶ್ರಮಿಸುತ್ತೇನೆ ಎಂದರು.

ನಾಮಪತ್ರ ಹಿಂದಕ್ಕೆ ಪಡೆಯಲು ಬೇರೆ ಬೇರೆ ಕಡೆಯಿಂದ ಸಾಕಷ್ಟು ಒತ್ತಡವಿತ್ತು. ಆದರೆ ಕಣಕ್ಕೆ ಇಳಿದಾಗಿದೆ. ಸುಮಾರು 6 ಸಾವಿರ ಮತದಾರರನ್ನು ತಲುಪಲು ಸಹಕಾರಿ ರಂಗದ 4 ಲಕ್ಷ ಜನರು ನನ್ನೊಂದಿಗೆ ಇದ್ದಾರೆ ಎಂಬ ವಿಶ್ವಾಸವಿದೆ. ನಾನು ನಿಮ್ಮವ ಎಂದು ಭಾವಿಸಿ ಯಾವ ಆಸೆ, ಯಾರದೇ ಆಮಿಷಕ್ಕೆ ಬಲಿಯಾಗದೆ ಎಲ್ಲರೂ ನನ್ನ ಗೆಲುವಿಗೆ ಶ್ರಮಿಸಬೇಕು ಎಂದು ವಿನಂತಿಸಿದರು.

ವೇದಿಕೆಯಲ್ಲಿ ಉದ್ಯಮಿ ಶ್ರೀನಾಥ್ ಹೆಬ್ಬಾರ್, ಕಂಬಳ ಅಕಾಡೆಮಿಯ ಅಧ್ಯಕ್ಷ ಗುಣಪಾಲ ಕಡಂಬ, ಧರ್ಮಗುರುಗಳಾದ ರೆ.ಫಾ. ಸಂತೋಷ್ ಕುಮಾರ್, ಮುಹಮ್ಮದ್ ಕಾಮಿಲ್ ಸಖಾಫಿ, ಪುರೋಹಿತರಾದ ರಮೇಶ್ ಭಟ್, ಹಿರಿಯ ಸಹಕಾರಿಗಳಾದ ಡಿಸಿಸಿ ಬ್ಯಾಂಕಗ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಈಶ್ವರ ಭಟ್ , ಉದ್ಯಮಿಗಳಾದ ರೋಹನ್ ಮೊಂತೆರೋ, ಸಿರಾಜ್ ಅಹ್ಮದ್ ಇನ್‌ಲ್ಯಾಂಡ್, ಲಕ್ಷ್ಮೀಶ ಭಂಡಾರಿ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಸುಂದರ ಮಾಸ್ಟರ್, ಉಡುಪಿ ಜಿ.ಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಪ್ರಮುಖ ಸಂಘಟನೆಗಳ ಮುಖಂಡರಾದ ವರ್ಗೀಸ್ ಕಡಬ, ಜಯಕರ ಶೆಟ್ಟಿ ಇಂದ್ರಾಳಿ, ಕೆ.ಪಿ. ಥಾಮಸ್ ನೆಲ್ಯಾಡಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ವೈ. ಸುಧೀರ್ ಕುಮಾರ್, ಪದ್ಮಶೇಖರ್ ಜೈನ್ ಮೊದಲಾದವರು ಉಪಸ್ತಿತರಿದ್ದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬೆಳಪು ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಶಿಕುಮಾರ್ ರೈ ಬಾಲ್ಯೊಟ್ಟು ವಂದಿಸಿದರು. ಅರ್‌.ಜೆ. ಪ್ರಸನ್ನ ನಿರೂಪಿಸಿದರು.

Leave A Reply

Your email address will not be published.