ಮಂಗಳೂರು:ಜಿಲ್ಲೆಯಲ್ಲಿ ಮತ್ತೊಮ್ಮೆ ಸುದ್ದಿಯಾಗಿದೆ ನೈತಿಕ ಪೊಲೀಸ್ ಗಿರಿ!! ತಡರಾತ್ರಿ ಬೈಕ್ ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯನ್ನು ಬೆನ್ನಟ್ಟಿ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ !!
ಜಿಲ್ಲೆಯಲ್ಲಿ ಮತ್ತೊಂದು ನೈತಿಕಗಿರಿ ಪ್ರಕರಣ ನಿನ್ನೆ ತಡರಾತ್ರಿ ನಡೆದಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಏಳು ಮಂದಿಯ ಬಂಧನವಾಗಿದೆ.
ಘಟನೆ ವಿವರ:ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ವಿದ್ಯಾರ್ಥಿಯೋರ್ವ ವಿದ್ಯಾರ್ಥಿನಿಯೋರ್ವಳನ್ನು ತನ್ನ ಬೈಕ್ ನಲ್ಲಿ ಕುಳ್ಳಿರಿಸಿಕೊಂಡು ಹೋಗುತ್ತಿರುವುದನ್ನು ವಿರೋಧಿಸಿದ ಯುವಕರ ತಂಡವೊಂದು ಬೆನ್ನಟ್ಟಿ ಅಡ್ಡಹಾಕಿ ಥಳಿಸಿದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಲಾಗಿದೆ.
ಸುರತ್ಕಲ್ ಮುಕ್ಕದ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಯಾದ ಮೊಹಮ್ಮದ್ ಯಾಸಿನ್ ಎಂಬಾತ ಆತನ ಸ್ನೇಹಿತೆ ಅದೇ ಕಾಲೇಜಿನ ವಿದ್ಯಾರ್ಥಿನಿಯೋರ್ವಳನ್ನು ಆಕೆಯೇ ಹೇಳಿದ್ದರ ಕಾರಣ ಸುರತ್ಕಲ್ ನಲ್ಲಿರುವ ಅಪಾರ್ಟ್ಮೆಂಟ್ ಒಂದಕ್ಕೆ ಬಿಡಲೆಂದು ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿರುವುದನ್ನು ಕಂಡ ಯುವಕರ ತಂಡವೊಂದು ಅವರಿಬ್ಬರನ್ನು ಹಿಂಬಾಲಿಸಿದ್ದಾರೆ.
ಅಪಾರ್ಟ್ಮೆಂಟ್ ತಲುಪುತ್ತಿದ್ದಂತೆ ತಡೆದು ನಿಲ್ಲಿಸಿದ ತಂಡವು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ, ಯುವತಿಯರು ಮೈಗೆ ಕೈಹಾಕಿ ಹಲ್ಲೆಗೆ ಮುಂದಾಗಿದ್ದಾರೆ. ಅದಲ್ಲದೇ ಕೊಲೆ ಬೆದರಿಕೆ ಕೂಡಾ ಹಾಕಿದ್ದಾರೆ ಎಂದು ದೂರಲಾಗಿದೆ.
ಸದ್ಯ ಪ್ರಕರಣ ನಡೆದು ಕೆಲ ಹೊತ್ತಿನಲ್ಲೇ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಪ್ರಹ್ಲಾದ್ ಆಚಾರ್ಯ, ಪ್ರಶಾಂತ್ ಆಚಾರ್ಯ, ಗುರುಪ್ರಸಾದ್, ಪ್ರತೀಶ್ ಆಚಾರ್ಯ, ಭರತ್ ಶೆಟ್ಟಿ ಎಂದು ಗುರುತಿಸಲಾಗಿದೆ.
ವಿಷಯ ತಿಳಿದು ತಡರಾತ್ರಿಯೇ ಮಂಗಳೂರು ಕಮಿಷನರ್ ಎನ್.ಶಶಿಕುಮಾರ್ ಸುರತ್ಕಲ್ ಠಾಣೆಗೆ ಭೇಟಿ ನೀಡಿದ್ದು, ಪರಿಸ್ಥಿತಿ ಅವಲೋಕಿಸಿದ್ದಾರೆ ಎಂದು ತಿಳಿದುಬಂದಿದೆ.