‘ಹಿಂದುತ್ವ’ವನ್ನು ಉಗ್ರವಾದಿ ಸಂಘಟನೆಗೆ ಹೋಲಿಕೆ ಮಾಡಿ ಪುಸ್ತಕ ಬರೆದ ಸಲ್ಮಾನ್ ಖುರ್ಷಿದ್ !! | ವಿವಾದ ಹುಟ್ಟು ಹಾಕಿದ ಕಾಂಗ್ರೆಸ್ ನಾಯಕನ ಮನೆಗೆ ಬೆಂಕಿ
ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ತನ್ನ ಅಯೋಧ್ಯೆಯ ಬಗೆಗಿನ ಪುಸ್ತಕದಲ್ಲಿ ಹಿಂದುತ್ವದ ಬಗ್ಗೆ ವಿವಾದಿತವಾಗಿ ಬರೆದಿರುವುದು ಈಗ ದೊಡ್ಡ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು, ಆಕ್ರೋಶಗೊಂಡ ಜನರು ಸಲ್ಮಾನ್ ಖುರ್ಷಿದ್ ಮನೆಗೆ ಬೆಂಕಿ ಹಚ್ಚಿ ಧ್ವಂಸ ಮಾಡಿದ್ದಾರೆ.
ಹಿಂದುತ್ವ ಹಾಗೂ ಉಗ್ರವಾದಿ ಸಂಘಟನೆಗಳ ನಡುವೆ
ಹೋಲಿಕೆ ಮಾಡಿ ತನ್ನ ಪುಸ್ತಕದಲ್ಲಿ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಉಲ್ಲೇಖ ಮಾಡಿದ್ದರು. ಈ ಬೆನ್ನಲ್ಲೇ ನೈನಿತಾಲ್ನಲ್ಲಿನ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ನಿವಾಸವನ್ನು ಧ್ವಂಸ ಮಾಡಲಾಗಿದ್ದು, ಬೆಂಕಿ ಹಾಕಲಾಗಿದೆ.
ಮನೆ ಧ್ವಂಸದ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ಖುರ್ಷಿದ್, ಇದೀಗ ಸಾಕಷ್ಟು ಚರ್ಚೆಯಾಗಿದೆ. “ನಾನು ನನ್ನ ಸ್ನೇಹಿತರಿಗಾಗಿ ಬಾಗಿಲು ತೆರೆದೆ. ಆದರೆ ಈ ಆ ಸ್ನೇಹಿತರು ಈ ರೀತಿ ಮಾಡಿಹೋಗಿದ್ದಾರೆ. ನಾನು ಈಗಲೂ ಇಂತಹದ್ದು ಹಿಂದೂ ಧರ್ಮ ಎಂದು ಹೇಳುವುದು ತಪ್ಪೇ?” ಎಂದು ಸಲ್ಮಾನ್ ಖುರ್ಷಿದ್ ಪ್ರಶ್ನೆ ಮಾಡಿದ್ದಾರೆ.
ಸಲ್ಮಾನ್ ಖುರ್ಷಿದ್ ಪುಸ್ತಕದಲ್ಲಿ ಏನಿದೆ?
“ಅಯೋಧ್ಯೆಯಲ್ಲಿ ಸುರ್ಯೋದಯ: ನಮ್ಮ ಕಾಲದಲ್ಲಿ ರಾಷ್ಟ್ರತ್ವ” ಎಂಬ ಶೀರ್ಷಿಕೆಯಲ್ಲಿ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹೊಸ ಪುಸ್ತಕವೊಂದನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಬರೆಯಲಾಗಿರುವ ಕೆಲವು ವಿಚಾರಗಳು ಭಾರೀ ವಿವಾದವನ್ನು ಸೃಷ್ಟಿ ಮಾಡಿದೆ. “ಸನಾತನ ಧರ್ಮ ಮತ್ತು ಋಷಿಗಳು, ಸಂತರ ಶಾಸ್ತ್ರೀಯವಾದ ಹಿಂದೂ ಧರ್ಮವನ್ನು ಹಿಂದುತ್ವವು ಬದಿಗೆ ತಳ್ಳಿದೆ. ಇತ್ತೀಚಿಗೆ ಹಿಂದುತ್ವವು ಐಸಿಸ್ ಹಾಗೂ ಬೊಕೊ ಹರಾಮ್ನಂತಹ (ಉಗ್ರವಾದಿ ಸಂಘಟನೆ) ಇಸ್ಲಾಂ ಜಿಹಾದಿಗಳ ಗುಂಪಿನಂತೆ ಆಕ್ರಮಣಕಾರಿ ಆಗಿದೆ” ಎಂದು ಈ ಪುಸ್ತಕದಲ್ಲಿ ಸಲ್ಮಾನ್ ಖುರ್ಷಿದ್ ಉಲ್ಲೇಖ ಮಾಡಿದ್ದಾರೆ.
ಈ ವಿಚಾರದಲ್ಲಿ ಬಿಜೆಪಿಯು ಸಲ್ಮಾನ್ ಖುರ್ಷಿದ್ ವಿರುದ್ಧ ವಾಗ್ದಾಳಿ ನಡೆಸಿದ್ದು, “ಸಲ್ಮಾನ್ ಖುರ್ಷಿದ್ ರ ಈ ಹೇಳಿಕೆಯು ಹಿಂದೂ ಧರ್ಮದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಈಗ ಕಾಂಗ್ರೆಸ್ ಈ ರೀತಿಯಾಗಿ ಕೋಮು ಹೇಳಿಕೆ ನೀಡಿ, ಮತ್ತೆ ಮುಸ್ಲಿಮರ ಮತವನ್ನು ಪಡೆದುಕೊಳ್ಳುವ ಯತ್ನ ಮಾಡುತ್ತಿದೆ. ಕಾಂಗ್ರೆಸ್ ಮುಸ್ಲಿಮರ ಮತಕ್ಕಾಗಿ ಓಲೈಕೆಯ ರಾಜಕೀಯ ಮಾಡುತ್ತಿದೆ,” ಎಂದು ಆರೋಪ ಮಾಡಿದ್ದಾರೆ. ಇನ್ನು ರಾಹುಲ್ ಗಾಂಧಿ, ಹಿಂದೂ ಧರ್ಮ ಹಾಗೂ ಹಿಂದುತ್ವದ ಬಗ್ಗೆಗಿನ ವ್ಯತ್ಯಾಸವನ್ನು ಉಲ್ಲೇಖ ಮಾಡುತ್ತಿದ್ದಂತೆ ಬಿಜೆಪಿಯು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದೆ. “ಕಾಂಗ್ರೆಸ್ ಪಕ್ಷಕ್ಕೆ ಹಿಂದುತ್ವದ ಮೇಲಿನ ದ್ವೇಷದ ರೋಗವಿದೆ” ಎಂದು ಬಿಜೆಪಿ ಹೇಳಿದೆ.
ಕಾಂಗ್ರೆಸ್ ನಾಯಕರುಗಳಿಂದಲೇ ಆಕ್ಷೇಪ
ಇದಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್, “ಈ ಹೇಳಿಕೆಯು ತಪ್ಪು ಹಾಗೂ ಅತಿಶಯೊಕ್ತಿ” ಎಂದು ಹೇಳಿದ್ದಾರೆ. “ಸಲ್ಮಾನ್ ಖುರ್ಷಿದ್ ಪುಸ್ತಕದಲ್ಲಿ ನಾವು ಹಿಂದುತ್ವವನ್ನು ರಾಜಕೀಯ ಸಿದ್ಧಾಂತವಾಗಿ ಒಪ್ಪದೆ ಇರಬಹುದು. ಆದರೆ ಹಿಂದುತ್ವವನ್ನು ಐಸಿಸ್ ಹಾಗೂ ಜಿಹಾದಿಗಳ ಜೊತೆ ತುಲನೆ ಮಾಡುವುದು ಅತಿಶಯೊಕ್ತಿ” ಎಂದು ಹಿರಿಯ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಟ್ವಿಟ್ ಮಾಡಿದ್ದಾರೆ.