ಡಿ.31ರಿಂದ ಜ.2 : ಆಳ್ವಾಸ್ ನುಡಿಸಿರಿ,ಆಳ್ವಾಸ್ ವಿರಾಸತ್ | ಎರಡು ವರ್ಷದ ಬಳಿಕ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ಅನಾವರಣಗೊಳ್ಳಲಿದೆ ಸಾಂಸ್ಕೃತಿಕ ರಂಗದ ವೈವಿಧ್ಯತೆ
ಮೂಡಬಿದಿರೆ :ಎರಡು ವರ್ಷಗಳ ನಂತರ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಮತ್ತೆ ಆಳ್ವಾಸ್ ವಿರಾಸತ್, ಆಳ್ವಾಸ್ ನುಡಿಸಿರಿ ವೈಭವಿಸಲಿದೆ. ಈ ವರ್ಷ ಎರಡೂ ಕಾರ್ಯಕ್ರಮಗಳು ಜಂಟಿಯಾಗಿ ನಡೆಯಲಿದೆ.
ಡಿ.31ರಿಂದ ಜ.2ರವರೆಗೆ ಜಂಟಿ ಉತ್ಸವ
ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ 2021ರ ಡಿಸೆಂಬರ್ 31ರಂದು ಆಳ್ವಾಸ್ ವಿರಾಸತ್ ಮತ್ತು ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ಉದ್ಘಾಟನೆಗೊಂಡು, 2022ರ ಜ.2ರವರೆಗೆ ಮುಂದುವರಿಯಲಿದೆ. ಹಗಲಿನ ಹೊತ್ತು ವಿದ್ಯಾಗಿರಿಯಲ್ಲಿ ನುಡಿಸಿರಿ ನಡೆದರೆ, ಸಂಜೆ ವೇಳೆ ಪುತ್ತಿಗೆ ವಿವೇಕಾನಂದ ನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ ನಡೆಯಲಿದೆ.
ವಿರಾಸತ್ ಮತ್ತು ನುಡಿಸಿರಿ ಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಕೋವಿಡ್ ಮಾರ್ಗಸೂಚಿ ಈಗಲೂ ಜಾರಿಯಾಗಿರುವ ಕಾರಣ ಇಡೀ ಕಾರ್ಯಕ್ರಮವನ್ನು ವೈಭವಕ್ಕೆ ವಿಶೇಷ ಆದ್ಯತೆ ನೀಡಿದರೆ, ಅರ್ಥಪೂರ್ಣವಾಗಿ ಮಾಡಲು ನಿರ್ಧರಿಸಲಾಗಿದೆ. ನುಡಿಸಿರಿ ಮತ್ತು ವಿರಾಸತ್ ಬಗ್ಗೆ ಆಸಕ್ತಿಯಿರುವವರು ಮಾತ್ರ ಬರಬೇಕೆಂಬುದು ನಮ್ಮ ನಿರೀಕ್ಷೆ. ನುಡಿಸಿರಿ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ 3 ಸಾವಿರ ಮಂದಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದ್ದು, ವಿರಾಸತ್ ಪುತ್ತಿಗೆಯಲ್ಲಿ ನಡೆಯುವ ಕಾರಣ ಯಾವುದೇ ನಿಬಂಧನೆಗಳನ್ನು ಹಾಕುತ್ತಿಲ್ಲ ಎನ್ನುತ್ತಾರೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ
ಸಾಂಸ್ಕೃತಿಕ ರಂಗದ ವೈವಿಧ್ಯತೆಯಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಹೆಸರು ಪಡೆದಿರುವ ಆಳ್ವಾಸ್ ವಿರಾಸತ್ ಈಗಾಗಲೇ 25ವರ್ಷ ಪೂರೈಸಿದ್ದು, ನುಡಿಹಬ್ಬವಾದ ಆಳ್ವಾಸ್ ನುಡಿಸಿರಿ 17ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಎರಡು ವಿಭಿನ್ನ ಕಾರ್ಯಕ್ರಮಗಳು ತನ್ನದೇ ಆದ ರೂಪ ಪಡೆದುಕೊಂಡಿದ್ದು, ಪ್ರತಿ ವರ್ಷ ಲಕ್ಷಾಂತರ ಮಂದಿ ಈ ವೈಭವವನ್ನು ಕಣ್ತುಂಬಿಕೊಳ್ಳಲು ನಿರೀಕ್ಷೆಯಿಂದ ಕಾಯುತ್ತಿದ್ದರು.
ರಾಷ್ಟ್ರಮಟ್ಟದಿಂದ ಕಲಾವಿದರು, ಸಾಹಿತಿಗಳನ್ನು ಈ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತಿತ್ತು.ಕಳೆದ ಎರಡು ವರ್ಷದಿಂದ ಕೊರೊನಾದಿಂದಾಗಿ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಈ ಬಾರಿ ಸರಕಾರದ ಮಾರ್ಗಸೂಚಿ ಪಾಲಿಸಿಕೊಂಡು ಈ ಕಾರ್ಯಕ್ರಮಗಳು ನಡೆಯಲಿದೆ.
ಸಾಮಾನ್ಯವಾಗಿ ನುಡಿಸಿರಿ ಸಂದರ್ಭ ವಿದ್ಯಾರ್ಥಿ ಸಿರಿ, ಕೃಷಿ ಸಿರಿ, ಚಿತ್ರಕಲಾ ಸಿರಿ, ಜಾನಪದ ಸಿರಿ ಸೇರಿದಂತೆ ನಾನಾ ವಿಭಾಗಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ಈ ರೀತಿ ವಿಂಗಡಣೆಗಳು ಇಲ್ಲ. ಪುಸ್ತಕ ಪ್ರದರ್ಶನ, ವಸ್ತುಪ್ರದರ್ಶನಗಳು ಎಂದಿನಂತೆಯೇ ಇರಲಿವೆ. ಮುಂದಿನ ವರ್ಷ ಕೋವಿಡ್ ಸಂಪೂರ್ಣ ನಿರ್ಮೂಲನೆಯಾಗಿ ನಮ್ಮ ನಾಡು ಹಿಂದಿನ ವೈಭವಕ್ಕೆ ಮರಳಿದರೆ ಮತ್ತೆ ನುಡಿಸಿರಿ, ವಿರಾಸತ್ ಹಿಂದಿನ ವೈಭವಕ್ಕೆ ಮರಳಲಿದೆ ಎನ್ನುತ್ತಾರೆ ಡಾ. ಮೋಹನ್ ಆಳ್ವ.
ನುಡಿಸಿರಿ ಸಂದರ್ಭ ಸಾಮಾನ್ಯವಾಗಿ 11ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿತ್ತು. ಅಲ್ಲಲ್ಲಿ ಕಲಾ ತಂಡಗಳು ಪ್ರದರ್ಶನಗಳು ನೀಡುತ್ತಿದ್ದವು. ಆದರೆ ಈ ಬಾರಿ ಸಂಜೆಯ ವೇಳೆ ಪುತ್ತಿಗೆಯಲ್ಲಿರುವ ಬಯಲುರಂಗ ಮಂದಿರ ವಿರಾಸತ್ ವೇದಿಕೆಯಲ್ಲಿ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ.
ಈ ಬಾರಿಯ ನುಡಿಸಿರಿ ಕಾರ್ಯಕ್ರಮಕ್ಕೆ ಯಾವುದೇ ನೋಂದಣಿ ಶುಲ್ಕವಿಲ್ಲ. ಈ ಕಾರ್ಯಕ್ರಮಗಳ ಆಸಕ್ತಿಯಿರುವವರೇ ಬರಬೇಕು ಮತ್ತು ಮೂರು ದಿನಗಳ ಕಾಲ ವಾಸ್ತವ್ಯವಿರಬೇಕೆಂಬ ನಿರೀಕ್ಷೆ ನಮ್ಮದು ಎನ್ನುತ್ತಾರೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ.
‘ಕೋವಿಡ್ ಬಳಿಕದ ಸವಾಲು’ ಪರಿಕಲ್ಪನೆ
ಎರಡು ವರ್ಷದ ಬಳಿಕ ಆಳ್ವಾಸ್ ವಿರಾಸತ್ ಮತ್ತು ನುಡಿಸಿರಿ ಕಾರ್ಯಕ್ರಮಗಳನ್ನು ಪುನರಾರಂಭಿಸಲು ನಿರ್ಧರಿಸಲಾಗಿದ್ದು, ಇಡೀ ಕಾರ್ಯಕ್ರಮ ‘ಕೋವಿಡ್ ಬಳಿಕದ ಸವಾಲುಗಳು’ ಪರಿಕಲ್ಪನೆಯಲ್ಲಿ ನಡೆಯಲಿದೆ ಎಂದು ಡಾ. ಆಳ್ವ ತಿಳಿಸಿದ್ದಾರೆ.
ಆಳ್ವಾಸ್ ವಿರಾಸತ್, ಆಳ್ವಾಸ್ ನುಡಿಸಿರಿ ಒಂದು ಮಾದರಿ ಕಾರ್ಯಕ್ರಮವಾಗಿ ರೂಪುಗೊಂಡು, ಜೀವನದ ಅವಿಭಾಜ್ಯ ಅಂಗದಂತಾಗಿತ್ತು. ಈ ಅವಳಿ ಕಾರ್ಯಕ್ರಮ ಐಪಿಎಲ್, ವಿಂಬಲ್ಡನ್, ಪಿಫಾದಂತೆ ಈ ಎರಡು ಕಾರ್ಯಕ್ರಮಗಳು ಪ್ರಸಿದ್ಧಿ ಪಡೆದಿದ್ದವು. ಕೋವಿಡ್ ಸೋಂಕಿನ ಬಳಿಕ ದೇಶದ ಜಿಡಿಪಿ, ಆರ್ಥಿಕ ನಷ್ಟದ ಬಗ್ಗೆ ಮಾತನಾಡುತ್ತೇವೆ. ಆದರೆ ನುಡಿಸಿರಿ, ವಿರಾಸತ್‌ನಿಂದ ಮನಸ್ಸು ಕಟ್ಟುವ ಕೆಲಸಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಭಾಷಾ ಬದುಕು, ಸಾಂಸ್ಕೃತಿಕ ವೈಭವಕ್ಕೆ ಹಿನ್ನಡೆಯಾಗಿದೆ. ಎರಡು ವರ್ಷ ಕಾರ್ಯಕ್ರಮಗಳು ನಡೆಯದಿರುವುದರಿಂದ ಲಕ್ಷಾಂತರ ಮಂದಿ ಏನೋ ಕಳೆದುಕೊಂಡ ಭಾವನೆಯಲ್ಲಿದ್ದು, ಪದೇ ಪದೇ ಕರೆ ಮಾಡಿ ಈ ಕಾರ್ಯಕ್ರಮಗಳ ಬಗ್ಗೆ ವಿಚಾರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಈ ವರ್ಷ ಸರಕಾರದ ಮಾರ್ಗಸೂಚಿ ಪಾಲಿಸಿಕೊಂಡು ನುಡಿಸಿರಿ ಮತ್ತು ವಿರಾಸತ್ ಜಂಟಿಯಾಗಿ ನಡೆಸಲು ನಿರ್ಧರಿಸಲಾಗಿದೆ ಎಂದರು.
ಮೂರು ದಿನದ ಉತ್ಸವದ ಪರಿಕಲ್ಪನೆಯಲ್ಲಿ ಜಗತ್ತಿಗೆ ಆಘಾತ ನೀಡಿದ ಸಾಂಕ್ರಮಿಕ ರೋಗದಿಂದ ಶೈಕ್ಷಣಿಕ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರ, ಧಾರ್ಮಿಕ ಕ್ಷೇತ್ರ, ಆರೋಗ್ಯ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಕ್ರೀಡಾ ಕ್ಷೇತ್ರಕ್ಕೆ ಯಾವ ರೀತಿ ಪರಿಣಾಮ ಬೀರಿತ್ತು. ಮುಂದಿನ ದಿನಗಳಲ್ಲಿ ಇಂತಹ ಸವಾಲುಗಳನ್ನು ನಾವು ಹೇಗೆ ಎದುರಿಸಬೇಕು ಎಂಬುವುದರ ಚಿಂತನೆ, ಸ್ಪಷ್ಟ ಮಾಹಿತಿಯ ಸುತ್ತ ಉತ್ಸವ ನಡೆಯಲಿದೆ ಎಂದರು.