‘ಸ್ಮಾರ್ಟ್ ಸಿಟಿ’ ಯೋಜನೆ ಕುರಿತು ಪರಿಶೀಲನೆ ನಡೆಸಿದ ಸಿಎಂ | ಮೆಟ್ರೋ ಕಾಮಗಾರಿಯ ವೇಗ ಹೆಚ್ಚಿಸಲು ಸೂಚಿಸಿದ ಬೊಮ್ಮಾಯಿ

Share the Article

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಸಂಜೆ ಮಿಷನ್ 2022 ರ ಪ್ರಗತಿ ಪರಿಶೀಲಿಸಲು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯೋಜನೆಗಳ ಬಗೆಗೆ ಮಾಹಿತಿ ನೀಡಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆಗಾಗಿ ಪ್ರತ್ಯೇಕ ಸಭೆಯೊಂದನ್ನು ನಡೆಸುವುದಾಗಿ ತಿಳಿಸಿದ ಸಿಎಂ, ನಮ್ಮ ಮೆಟ್ರೋ ರೈಲು ಯೋಜನೆ ನಿಗದಿಯಂತೆ ಒಂದು ವರ್ಷದೊಳಗೆ ಮುಕ್ತಾಯಗೊಳ್ಳಬೇಕು, ಕಾಮಗಾರಿ ತ್ವರಿತಗೊಳಿಸಲು ಮತ್ತು ಅಗತ್ಯವಿರುವ ಎಲ್ಲಾ ಪೂರ್ವಸಿದ್ಧತಾ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಉಪನಗರ ರೈಲು ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, 15.40 ಕಿಮೀ ದೂರವನ್ನು ಒಳಗೊಂಡಿದೆ, ಇದಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಕೆಐಎಡಿಬಿ ಮೂಲಕ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ಬೊಮ್ಮಾಯಿ ಪ್ರಸ್ತಾಪಿಸಿದರು.

100 ಜಲಮಾರ್ಗ ಯೋಜನೆಯಡಿ ಒಳಚರಂಡಿ ನೀರು ಕಾಲುವೆಗಳಿಗೆ ಬರದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು. 128 ಕೋಟಿ ಅಂದಾಜು ವೆಚ್ಚದಲ್ಲಿ 25 ಕೆರೆಗಳ ಅಭಿವೃದ್ಧಿಯನ್ನು ಜನವರಿ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಕೆರೆಗಳನ್ನು ಅಭಿವೃದ್ಧಿಪಡಿಸಿ ಸುತ್ತಲೂ ಹಸಿರು ಬೇಲಿ ಹಾಕುವಂತೆ ಅಧಿಕಾರಿಗಳಿಗೆ ಸಿಎಂ ಸಲಹೆ ನೀಡಿದರು.

Leave A Reply