ಒಂದು ಬಿಲಿಯನ್ ಡೋಸ್ ಲಸಿಕೆ ನೀಡುವ ಮೂಲಕ ಪ್ರಶಂಸೆಗೆ ಪಾತ್ರವಾದ ಮೋದಿ ನೇತೃತ್ವದ ಸರ್ಕಾರ ಸಾಲದಲ್ಲಿ ಮುಳುಗಳಿದೆಯೇ?? ಎಲ್ಲಿ ಹೋಗಿದೆ ಪಿಎಂ ಕೇರ್ ಫಂಡ್??
ಒಂದು ಬಿಲಿಯನ್ ಡೋಸ್ ಲಸಿಕೆ ನೀಡುವ ಸರ್ಕಾರದ ಸಾಧನೆಗೆ ಇತ್ತೀಚಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದ್ದು,ಸರ್ಕಾರವೂ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಖುಶಿಪಟ್ಟಿತ್ತು.ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಲಸಿಕಾ ಅಭಿಯಾನದ ಖರ್ಚು ನಿಭಾಯಿಸಲು ಅಂತರರಾಷ್ಟ್ರೀಯ ಬ್ಯಾಂಕುಗಳಿಂದ ಸಾಲ ಪಡೆಯಲು ಮುಂದಾಗಿದೆ ಎಂಬ ವಿಷಯ ಕೇಳಿ ಬರುತಿದ್ದು,ಈ ಸಾಲದ ಅಗತ್ಯವಿತ್ತೇ??ಎಲ್ಲಿಹೋಯಿತು PM CARES ನಿಧಿ?ಎಂಬ ಪ್ರಶ್ನೆ ಜನತೆಗೆ ಎದ್ದು ನಿಲ್ಲುತ್ತಿದೆ.
ಏಷಿಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕಿನಿಂದ ‘ಸುರಕ್ಷಿತ ಹಾಗೂ ಪರಿಣಾಮಕಾರಿ ಕೋವಿಡ್ ಲಸಿಕೆ’ ಪಡೆಯಲು 500 ಮಿಲಿಯನ್ ಡಾಲರ್ ಮೊತ್ತದ ಸಾಲ ಕೇಳಿದೆ!ಇದಲ್ಲದೇ, ಏಷಿಯಾ ಪೆಸಿಫಿಕ್ ವ್ಯಾಕ್ಸಿನ್ ಆಯಕ್ಸೆಸ್ ಫೆಸಿಲಿಟಿ ಪ್ರೋಗ್ರಾಂ ಅಡಿಯಲ್ಲಿ ಕೂಡಾ ನಾಲ್ಕು ಮಿಲಿಯನ್ ಡಾಲರ್ ಸಾಲವನ್ನು ಭಾರತ ಪಡೆಯಲಿದೆ. ಈ ಸಾಲವನ್ನು ತಾಂತ್ರಿಕ ವಿಭಾಗಗಳಾದ ಲಸಿಕಾ ಕೇಂದ್ರಗಳ ಅಭಿವೃದ್ದಿ ಹಾಗೂ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಬಳಸಲಾಗುವುದು.
ಅಂದಹಾಗೆ ಲಸಿಕೆಗಳಿಗಾಗಿ ಭಾರತ ಮಾಡಿರುವುದು ಕೇವಲ ಇಷ್ಟು ಮಾತ್ರ ಸಾವಲ್ಲ. ಇದಕ್ಕು ಮೊದಲು ಏಷಿಯನ್ ಡೆವೆಲಪ್ಮೆಂಟ್ ಬ್ಯಾಂಕಿನಿಂದ ಲಸಿಕೆ ಖರೀದಿಗಾಗಿ 1.5 ಬಿಲಿಯನ್ ಡಾಲರ್ ಮೊತ್ತದ ಹಣ, ಸಾಲದ ರೂಪದಲ್ಲಿ ಭಾರತಕ್ಕೆ ಸಿಗಲಿದೆ. 670 ಮಿಲಿಯನ್ ಡೋಸ್ ಲಸಿಕೆ ಖರೀದಿಸಲು ಏಷಿಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕಿನಿಂದ ಸಾಲ ಪಡೆಯಲಾಗುತ್ತಿದೆ ಎಂದು ವರದಿಯಾಗಿದೆ.
ಈವರೆಗೆ ಲಸಿಕಾ ಅಭಿಯಾನಕ್ಕೆ ಸರ್ಕಾರ ಎಷ್ಟು ಮೊತ್ತವನ್ನು ವ್ಯಯಿಸಿದೆ ಎಂಬ ಕುರಿತು ಅಧಿಕೃತ ಅಂಕಿ ಅಂಶಗಳು ಲಭ್ಯವಿಲ್ಲ. ಆದರೆ, ಸರ್ಕಾರವು ಒಂದು ಬಿಲಿಯನ್ ಡೋಸ್ ಲಸಿಕೆಗೆ ಅಂದಾಜು ರೂ.19,000 ಖರ್ಚು ಮಾಡಿದೆ. ಸುಪ್ರೀಂ ಕೋರ್ಟ್’ಗೆ ಸರ್ಕಾರ ನೀಡಿರುವ ಅಫಿಡವಿಟ್ ಹಾಗೂ ಪಾರ್ಲಿಮೆಂಟ್’ನಲ್ಲಿ ಸಚಿವರು ನೀಡಿರುವ ಉತ್ತರದ ಆಧಾರದ ಮೇಲೆ ಈ ಅಂದಾಜು ಲೆಕ್ಕ ಹಾಕಲಾಗಿದೆ.
2020ರ ಮಾರ್ಚ್ ತಿಂಗಳಲ್ಲಿ ಪ್ರಧಾನಿ ಮೋದಿ ಪಿಎಂ ಕೇರ್ಸ್ ನಿಧಿ ತೆರೆದಿರುವ ಘೋಷಣೆ ಮಾಡಿದರು. ಸಿಎಸ್ಆರ್ ನಿಧಿಯ ಹಣವನ್ನು ಪಿಎಂ ಕೇರ್ಸ್’ಗೆ ನೀಡಿದ್ದಲ್ಲಿ ಅಂತಹ ಕಂಪನಿಗಳಿಗೆ ತೆರಿಗೆ ವಿನಾಯಿತಿಯನ್ನೂ ಘೋಷಿಸಿದರು. ಆದರೆ,ಇದೊಂದು ಖಾಸಗಿ ಟ್ರಸ್ಟ್, ಮಾಹಿತಿ ಹಕ್ಕು ಕಾಯ್ದೆಯಡಿ ಬರುವುದಿಲ್ಲ ಎಂದು ಹೇಳಿ ನಿಧಿಯ ಪಾರದರ್ಶಕತೆಗೆ ಪರದೆ ಮುಚ್ಚಿದ್ರು.
ಹಲವು ಸಂಸ್ಥೆಗಳು ನೀಡಿರುವ ವರದಿಯ ಪ್ರಕಾರ ಕೇವಲ 52 ದಿನಗಳಲ್ಲಿ ಈ ನಿಧಿಗೆ ಬರೋಬ್ಬರಿ 1.27 ಬಿಲಿಯನ್ ಡಾಲರ್ ಹಣ ಹರಿದು ಬಂದಿತ್ತು. ಇದು ಕೇವಲ ಬೃಹತ್ ಕಾರ್ಪೊರೇಟ್ ಕಂಪನಿ ಹಾಗೂ ಕೇಂದ್ರ ಸರ್ಕಾರದ ನೌಕರರ ಒಂದು ದಿನದ ಸಂಬಳದ ದೇಣಿಗೆಯ ಅಂದಾಜು ಲೆಕ್ಕಾಚಾರವಷ್ಟೇ. ವೈಯಕ್ತಿಕವಾಗಿ ನೀಡಿರುವ ದೇಣಿಗೆ ಮತ್ತು ಸಣ್ಣ ಪುಟ್ಟ ಸಂಸ್ಥೆಗಳ ದೇಣಿಗೆ ಇದರಲ್ಲಿ ಸೇರಿಲ್ಲ.
ಪ್ರಧಾನ ಮಂತ್ರಿ ಪರಿಹಾರ ನಿಧಿ ಎಂಬ ಖಾತೆ ನೇರವಾಗಿ ಪ್ರಧಾನಿ ಕಚೇರಿಯಡಿ ಕಾರ್ಯನಿರ್ವಹಿಸುತ್ತಿದ್ದರೂ, ಅದನ್ನು ಪರಿಗಣಿಸಲಾಗಿಲ್ಲ. 2019ರ ಡಿಸೆಂಬರ್ ವೇಳೆಗೆ PMNRF ನಿಧಿಯಲ್ಲಿ ರೂ. 3,800 ಕೋಟಿ ಹಣ ವಿನಿಯೋಗವಾಗದೇ ಉಳಿದುಕೊಂಡಿದ್ದು.ಇದರ ಖರ್ಚು ವೆಚ್ಚಗಳ ಲೆಕ್ಕವನ್ನು ಕೇಳಿ ನೂರಾರು RTI ಅರ್ಜಿಗಳನ್ನು ಸಲ್ಲಿಸಲಾಗಿದೆಯಾದರೂ, ಇನ್ನೂ ಒಂದೇ ಒಂದು ಅರ್ಜಿಗೆ ಸಮರ್ಪಕ ಉತ್ತರವನ್ನು ಸರ್ಕಾರ ನೀಡಿಲ್ಲ. ಇದೊಂದು ಖಾಸಗಿ ಟ್ರಸ್ಟ್, ಹಾಗಾಗಿ ಇದನ್ನು RTI ಅಡಿ ಪರಿಗಣಿಸಲಾಗುವುದಿಲ್ಲ ಎಂದು ಪ್ರಧಾನಿ ಕಾರ್ಯಾಲಯ ಉತ್ತರಿಸಿದೆ.
ಪಿಎಂ ಕೇರ್ಸ್ ಅಧಿಕೃತ ಜಾಲತಾಣದಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಈವರೆಗೆ ರೂ.3100 ಕೋಟಿಯನ್ನು ವೆಂಟಿಲೇಟರ್ ಖರೀದಿ ಹಾಗೂ ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಲಾಗಿದೆ. ಈ ಮಾಹಿತಿಯ ಹೊರತಾಗಿ ಬೇರೆ ಯಾವುದೇ ಮಾಹಿತಿ ಜಾಲತಾಣದಲ್ಲಿ ಲಭ್ಯವಿಲ್ಲ.ಈಗ ಲಸಿಕೆ ಪಡೆಯಲು ಕೇಂದ್ರ ಸರ್ಕಾರ ಸಾಲ ಪಡೆಯುತ್ತಿರುವುದರಿಂದ ದೇಶದ ಮೇಲಿನ ಸಾಲದ ಹೊರೆ ಮತ್ತಷ್ಟು ಹೆಚ್ಚಾಗಲಿದೆ. ಮಾರ್ಚ್ 31ರ ವೇಳೆಗೆ ದೇಶದ ಒಟ್ಟು ಸಾಲ 571 ಬಿಲಿಯನ್ ಡಾಲರ್’ಗೆ ತಲುಪಿತ್ತು. ಮಾರ್ಚ್ 2020ರ ಬಳಿಕ 1.6 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
ಹೀಗೆ, ಪಾರದರ್ಶಕತೆ ಇಲ್ಲದ ಪಿಎಂ ಕೇರ್ಸ್ ನಿಧಿ, ಅವೈಜ್ಞಾನಿಕ ತೈಲ ಬೆಲೆ ಏರಿಕೆಗಳಿಂದ ಕೊಟ್ಯಾಂತರ ರೂ. ಆದಾಯವನ್ನು ಸರ್ಕಾರ ಪಡೆಯುತ್ತಿದ್ದರೂ ಲಸಿಕೆಗಳನ್ನು ಖರೀದಿಸಲು ಮತ್ತೆ ಸಾಲದ ಅಗತ್ಯವಿದೆಯೇ ಎಂಬ ಪ್ರಶ್ನೆ ನಿಜಕ್ಕೂ ಕಾಡುತ್ತಿದೆ. ಎಲ್ಲರಿಗೂ ಉಚಿತ ಲಸಿಕೆ ನೀಡುತ್ತಿದ್ದೇವೆ ಎಂಬ ಕಾರಣ ನೀಡಿ ದೇಶದ ಜನರ ಮೇಲೆ ಇನ್ನೆಷ್ಟು ಹೊರೆ ಹೊರಿಸಲು ಈ ಸರ್ಕಾರ ಹೊರಟಿದೆ ಎಂಬುದು ಕೂಡಾ ನಿಗೂಢವಾಗಿದೆ.