ಟೀಮ್ ಇಂಡಿಯಾದ ಹೊಸ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆ | ಮತ್ತೆ ಕನ್ನಡಿಗನಿಗೇ ಮಣೆ ಹಾಕಿದ ಬಿಸಿಸಿಐ !!
ಟೀಮ್ ಇಂಡಿಯಾಕ್ಕೆ ಇದೀಗ ಹೊಸ ಸಾರಥಿಯಾಗಿ ಕನ್ನಡಿಗ ಆಯ್ಕೆಯಾಗಿದ್ದಾರೆ. ಭಾರತ ಕ್ರಿಕೆಟ್ ತಂಡಕ್ಕೆ ಮಾಜಿ ನಾಯಕ ರಾಹುಲ್ ದ್ರಾವಿಡ್ ಕೋಚ್ ಆಗಿ ನೇಮಕವಾಗಿದ್ದಾರೆ.
ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರ ಕಾರ್ಯಾವಧಿ ಮುಗಿಯಲಿದೆ. ವಿಶ್ವಕಪ್ ಬೆನ್ನಲ್ಲೇ ಟೀಮ್ ಇಂಡಿಯಾ ನವೆಂಬರ್ 17 ರಿಂದ ನ್ಯೂಜಿಲೆಂಡ್ ವಿರುದ್ದ ಸರಣಿ ಆಡಬೇಕಿದ್ದು, ಈ ಸರಣಿಯೊಂದಿಗೆ ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಕೆಲಸ ಶುರುವಾಗಲಿದೆ.
ಈ ಹಿಂದೆ ಅಂಡರ್ 19 ಟೀಮ್ ಇಂಡಿಯಾ ಹಾಗೂ ಭಾರತ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ರಾಹುಲ್ ದ್ರಾವಿಡ್ ಕಳೆದ ಬಾರಿ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡದ ಹಂಗಾಮಿ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಬಿಸಿಸಿಐ ಕೂಡ ರವಿ ಶಾಸ್ತ್ರಿ ಬಳಿಕ ಭಾರತ ತಂಡದ ಕೋಚ್ ಆಗಿ ದ್ರಾವಿಡ್ ಅವರನ್ನು ನೇಮಿಸಲು ಆಸಕ್ತಿವಹಿಸಿದ್ದರು. ಇದೀಗ ಅಂತಿಮವಾಗಿ ಅವಿರೋಧವಾಗಿ ದ್ರಾವಿಡ್ ಅವರನ್ನು ಬಿಸಿಸಿಐ ಟೀಮ್ ಇಂಡಿಯಾ ಕೋಚ್ ಆಗಿ ಆಯ್ಕೆ ಮಾಡಿದೆ.
ಭಾರತೀಯ ಕ್ರಿಕೆಟ್ ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದು ದೊಡ್ಡ ಗೌರವ. ನಾನು ಈ ಪಾತ್ರಕ್ಕಾಗಿ ನಿಜವಾಗಿಯೂ ಎದುರು ನೋಡುತ್ತಿದ್ದೇನೆ. ಶಾಸ್ತ್ರಿ ಅವರ ಅಡಿಯಲ್ಲಿ, ತಂಡವು ಉತ್ತಮವಾಗಿ ಕಾರ್ಯನಿರ್ವಹಿಸಿದೆ. ತಂಡದೊಂದಿಗೆ ಕೆಲಸ ಮಾಡಲು ನಾನು ಭಾವಿಸುತ್ತೇನೆ. NCA, U19 ಮತ್ತು ಇಂಡಿಯಾ ಎ ತಂಡಗಳಲ್ಲಿ ನಾನು ಕಾರ್ಯ ನಿರ್ವಹಿಸಿದ್ದೇನೆ. ಮುಂದಿನ ಎರಡು ವರ್ಷಗಳಲ್ಲಿ ಪ್ರಮುಖ ಟೂರ್ನಿಗಳಿವೆ. ಈ ಟೂರ್ನಿಗಾಗಿ ತಂಡದೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ದ್ರಾವಿಡ್ ಸಂತಸ ವ್ಯಕ್ತಪಡಿಸಿದ್ದಾರೆ.