ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಸರ್ಕಾರದಿಂದಲೇ ಗೋಪೂಜೆ | ಗೋಪೂಜೆ ನಡೆಸಲು ಅಧಿಕಾರಿಗಳ ನಿಯೋಜನೆ

ಬೆಂಗಳೂರು: ದೀಪಾವಳಿ ಪ್ರಯುಕ್ತ ರಾಜ್ಯದ ಎಲ್ಲ ದೇಗುಲಗಳಲ್ಲಿ ಗೋಪೂಜೆ ನಡೆಸಲು ಸರ್ಕಾರ ಆದೇಶಿಸಿದೆ ಅಲ್ಲದೆ ಸುಸೂತ್ರವಾಗಿ ಗೋಪೂಜೆ ನಡೆಸಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

 

ಆಯಾ ಜಿಲ್ಲೆಗಳಲ್ಲಿ ಪೂಜೆ ನೆರವೇರುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ. ಪೂಜೆಯ ದಿನ ಹಸುಗಳನ್ನು ದೇಗುಲಗಳಿಗೆ ಕರೆತರುವ ಹಾಗೂ ಗೋಪೂಜೆ ನೆರವೇರಿಸುವ ಜವಾಬ್ದಾರಿಯನ್ನು ನಿರ್ವಹಿಸುವಂತೆ ಪಶುಸಂಗೋಪನಾ ಸಚಿವ ಪ್ರಭು ಚವಾಣ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದೀಪಾವಳಿ ಹಬ್ಬದಂದು ಗೋಪೂಜೆ ಮಾಡುವಂತೆ ದೇಗುಲಗಳಿಗೆ ಕರ್ನಾಟಕ ಸರ್ಕಾರ ಆದೇಶ ನೀಡಿದೆ. ದೇಗುಲಗಳಲ್ಲಿ ಗೋಪೂಜೆ ಮಾಡಲು ಸರ್ಕಾರದ ಆದೇಶಿಸಿದೆ. ನವೆಂಬರ್ 5ರ ಬಲಿಪಾಡ್ಯಮಿಯಂದು ಪೂಜೆ ಸಲ್ಲಿಸಲು ಆದೇಶ ನೀಡಲಾಗಿದೆ. ಸಂಜೆ 5.30 ರಿಂದ 6.30ರ ವೇಳೆಯಲ್ಲಿ ಪೂಜೆಗೆ ಸೂಚನೆ ಕೊಡಲಾಗಿದೆ.

ಬಲಿಪಾಡ್ಯಮಿ ದಿನದಂದು ಇಲಾಖೆಯ ದೇವಾಲಯಗಳಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಲು ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆಯಿಂದ ಆದೇಶ ಕೊಡಲಾಗಿದೆ. ಬಲಿಪಾಡ್ಯಮಿ ದಿನ ಸಂಜೆ 5.30 ರಿಂದ 6.30ರ ಸಮಯದಲ್ಲಿ ರಾಜ್ಯದ ಎಲ್ಲ ಅಧಿಸೂಚಿತ ದೇವಾಲಯಗಳಲ್ಲಿ ಗೋವುಗಳನ್ನು ಸ್ನಾನ ಮಾಡಿಸಿ ದೇವಾಲಯದಲ್ಲಿ ಅರಿಶಿಣ, ಕುಂಕುಮ, ಹೂವುಗಳಿಂದ ಪೂಜಿಸಿ ಅಕ್ಕಿ, ಬೆಲ್ಲ, ಬಾಳೆಹಣ್ಣು ಮತ್ತು ಸಿಹಿ ತಿನಿಸಿಗಳನ್ನು ಹಸುಗಳಿಗೆ ನೀಡಿ ಆರಾಧಿಸಲು ಸೂಚನೆ ನೀಡಲಾಗಿದೆ.

ಗೋವುಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಮತ್ತು ಗೋಮಯ ಸೇರಿದಂತೆ ‘ಗೋವು ಉತ್ಪನ್ನ’ (ಹಸುವಿನ ಉತ್ಪನ್ನಗಳು) ಖರೀದಿಸಲು ಜನರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಸಚಿವ ಪ್ರಭು ಚವಾಣ್ ಹೇಳಿದರು.

ದೀಪಾವಳಿಗೆ ‘ಗೋಮಯ’ (ಹಸುವಿನ ಸಗಣಿಯಿಂದ ಮಾಡಿದ ದೀಪಗಳು) ಬಳಸುವಂತೆ ಜನರಿಗೆ ಮನವಿ ಮಾಡಿದರು. ಅಂತಹ ದೀಪಗಳು ಪರಿಸರ ಸ್ನೇಹಿಯಾಗಿವೆ ಹಾಗೂ ಬಳಕೆಯ ನಂತರ ಸಸ್ಯಗಳಿಗೆ ಗೊಬ್ಬರವಾಗಿ ಬಳಸಿಕೊಳ್ಳಬಹುದಾಗಿದೆ. ಇದರಿಂದ ರೈತರಿಗೆ ಹೆಚ್ಚುವರಿ ಆದಾಯ ಸಿಗುವುದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.

Leave A Reply

Your email address will not be published.